ಜ.27ರಿಂದ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆನ್‍ಲೈನ್ ಕೌನ್ಸಿಲಿಂಗ್

Update: 2022-01-26 13:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.26: 2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಜ.27ರಿಂದ (ಗುರುವಾರ) 30ರವರೆಗೆ ನಾಲ್ಕು ದಿನಗಳ ಕಾಲ ಆನ್‍ಲೈನ್ ಕೌನ್ಸಿಲಿಂಗ್ ನಡೆಯಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 10,636 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಜ್ಯೇಷ್ಠತೆ ಆಧಾರದ ಮೇಲೆ ತಮಗೆ ಬೇಕಾದ ಕಾಲೇಜನ್ನು ಕೌನ್ಸಿಲಿಂಗ್‍ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಬಳಿಕ ತಮ್ಮ ಕಚೇರಿಯಿಂದ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅದರ ನಂತರದ ಎರಡು ದಿನಗಳಲ್ಲಿ ತಮಗೆ ಸೂಚಿಸಿದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಅವರು ಮೂಲ ದಾಖಲೆಗಳನ್ನು ಪರಿಶೀಲನೆಗೆ ಒಪ್ಪಿಸಿ, ಕರ್ತವ್ಯಕ್ಕೆ ಹಾಜರಾಗಬೇಕು. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹವರನ್ನು ಕೈಬಿಡಲಾಗುವುದು ಎಂದು ಪ್ರದೀಪ್ ಹೇಳಿದ್ದಾರೆ.

ಒಟ್ಟು 47 ವಿಷಯಗಳಲ್ಲಿ ವಾರಕ್ಕೆ 15 ಗಂಟೆಗಳ ಬೋಧನೆಯ ಪೂರ್ಣ ಕಾರ್ಯಭಾರವಿರುವ 7,225 ಮತ್ತು ಭಾಗಶಃ ಕಾರ್ಯಭಾರವಿರುವ 3,411 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಹುದ್ದೆಗಳಲ್ಲಿ ವಾಣಿಜ್ಯ ವಿಷಯವು 1,830, ಕನ್ನಡ 1,008, ಇತಿಹಾಸ 675, ಇಂಗ್ಲಿμï 736, ಸಮಾಜಶಾಸ್ತ್ರ 526, ಅರ್ಥಶಾಸ್ತ್ರ 620, ಬಿಝಿನೆಸ್ ಮ್ಯಾನೇಜ್ಮೆಂಟ್ 490, ಕಂಪ್ಯೂಟರ್ ಸೈನ್ಸ್ 910, ಭೌತಶಾಸ್ತ್ರ 562, ರಾಜ್ಯಶಾಸ್ತ್ರ 602, ರಸಾಯನಶಾಸ್ತ್ರ 663, ಗಣಿತ 492, ಪ್ರಾಣಿಶಾಸ್ತ್ರ 198, ಸಸ್ಯಶಾಸ್ತ್ರ 212, ಮನೋವಿಜ್ಞಾನ 54, ಪರಿಸರ ವಿಜ್ಞಾನ 53, ಸಮಾಜಕಾರ್ಯ 80 ಮತ್ತು ಉರ್ದು 78 ಹುದ್ದೆಗಳನ್ನು ಹೊಂದಿವೆ ಎಂದು ಪ್ರದೀಪ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಆದ್ಯತೆ: ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿರುವವರನ್ನು ಜ್ಯೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೌನ್ಸಿಲಿಂಗ್ ಬಳಿಕ ಎಲ್ಲರೂ ಹಾಜರಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News