ರಾಜ್ಯ ಕಾಂಗ್ರೆಸ್‍ನಲ್ಲಿ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಲಿ: ಸಿ.ಟಿ.ರವಿ

Update: 2022-01-26 14:02 GMT

ಚಿಕ್ಕಮಗಳೂರು, ಜ.26: ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದರೇ ಆಂತಕ ಪಡುವ ಅಗತ್ಯವಿಲ್ಲ, ನಮ್ಮದು ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷ ಕಾಂಗ್ರೆಸ್ ಪಕ್ಷದಷ್ಟು ದುರ್ಬಲ ಪಕ್ಷವಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೇ, ಡಿ.ಕೆ.ಶಿವಕುಮಾರ್ ಪಕ್ಷದಿಂದ ಹೊರ ಬರುತ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿದರೇ ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ. ಇಬ್ಬರಲ್ಲಿ ಯಾರನ್ನೇ ಆಯ್ಕೆ ಮಾಡಿದರೂ ಪರಮೇಶ್ವರ್ ಸೇಡು ತೀರಿಸಿಕೊಳ್ಳಲು ಕಾಯ್ತಾ ಇದ್ದಾರೆ ಎಂದು ಲೇವಡಿಯಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾರು ಇರ್ತಾರೆ, ಹೋಗ್ತಾರೆ ಗೊತ್ತಿಲ್ಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಡ-ಬಲ ಇದ್ದವರೇ ಹಿಂದೇ ಪಕ್ಷ ಬಿಟ್ಟು ಹೋಗಿದ್ದಾರೆ. ಅವರನ್ನು ನಾವೇ ಕಳಿಸಿದ್ದು ಎಂದು ತಾಕತ್ತಿದ್ದರೇ ಹೇಳಲಿ ಎಂದು ಸವಾಲು ಹಾಕಿದರು.

2019ರ ವಿಧಾನಸಭೆ ಚುನಾವಣೆಯಲ್ಲಿ 26 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದ್ದರು. ಆದರೆ, ಪಕ್ಷ ಬಿಟ್ಟಿದ್ದು ಕಾಂಗ್ರೆಸ್ ಶಾಸಕರು. ಅವರ ಬಳಿ ಪಟ್ಟಿ ಇದ್ದರೇ ಬಹಿರಂಗಪಡಿಸಲಿ ಎಂದ ಅವರು, ಅವರ ಪಕ್ಷದ ಶಾಸಕರು ಏಕೆ ಪಕ್ಷ ಬಿಟ್ಟರು ಎಂದು ಸಂಶೋಧನೆ ನಡೆಸಲಿ, ಸುಮ್ಮನೆ ಪ್ರಚಾರಕ್ಕೆ ಹೇಳಿಕೆ ನೀಡಬಾರದು ಎಂದರು.

ಪಂಚರಾಜ್ಯ ಚುನಾವಣೆ ಸರ್ವೇಯಲ್ಲಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ. ಗೋವಾದಲ್ಲಿ ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಉತ್ತರ ಪ್ರದೇಶ, ಉತ್ತರಖಂಡ್, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಪಂಜಾಬ್‍ನಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News