ಮೈಸೂರು: ಮತಾಂತರಕ್ಕೆ ದೊಡ್ಡ ಪರಂಪರೆಯೇ ಇದೆ; ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ

Update: 2022-01-26 14:08 GMT

ಮೈಸೂರು,ಜ.26: ಗಣರಾಜ್ಯೋತ್ಸವ ದಿನದ ಅಂಗವಾಗಿ ದಲಿತ ಸಂಘಟನೆ ಸಮಿತಿ  ಒಕ್ಕೂಟದ ವತಿಯಿಂದ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಕರಪತ್ರ ಚಳವಳಿ ನಡೆಸಲಾಯಿತು.

ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಮುಂಭಾಗ ಬುಧವಾರ ಹಮ್ಮಿಕೊಂಡಿದ್ದ ಕರಪತ್ರ ಚಳವಳಿಗೆ ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮತಾಂತರಕ್ಕೆ ದೊಡ್ಡ ಪರಂಪರೆಯಿದೆ, ಗ್ರಾಮೀಣ ಭಾಗದಲ್ಲಿ ದೀಕ್ಷೆ, ಒಕ್ಕಲು ಎಂಬ ಪರಿಭಾಷೆ ಇದೆ. ಇಂತಹ ದೊಡ್ಡ ಪರಂಪರೆಯನ್ನೆ ನಿರ್ನಾಮ ಮಾಡುವ ಆಲೋಚನಾ ಕ್ರಮ ದೇಶವನ್ನು ಕಟ್ಟುವ ಆಲೋಚನಾ ಕ್ರಮ ಆಗಲಾರದು ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಧರ್ಮಗಳಿಗೆ ಸ್ವಘೋಷಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗತಿ. ಇಂತಹ ನಿಷೇದ ಕಾಯ್ದೆ ಜಾರಿಗೆ ಬಂದ ಮೇಲೆ ಧರ್ಮಗಳು ನಿರಾಳವಾಗಿಬಿಡುತ್ತವೆ. ಜಡವಾಗುತ್ತದೆ. ತಮ್ಮ ದಿನ ನಿತ್ಯದ ಆಲೋಚನೆ ಕ್ರಮದ ಜೊತೆಗೆ ಬದಲಾವಣೆ ಮಾಡಿಕೊಳ್ಳಬೇಕಾದ ಎಲ್ಲಾ ಸಾಧ್ಯತೆಗಳನ್ನು ಧರ್ಮದ ಅಸ್ಥಿತ್ವಗಳು ಕಳೆದುಕೊಳ್ಳು ಬಿಡುತ್ತದೆ. ನಿಂತ ನೀರಾಗುತ್ತದೆ ಎಂದು ಹೇಳಿದರು.

ಈಗಾಗಲೇ ಸಂವಿಧಾನದಲ್ಲಿ ಒತ್ತಾಯ, ಆಮಿಷದ ಮತಾಂತರ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸಬಹುದು ಎಂಬ ಕಾನೂನಿದೆ. ಸಂವಿಧಾನಾತ್ಮಕವಾಗಿ ಇರಬೇಕಾದ ವ್ಯವಸ್ಥೆಯೊಳಗಡೆ ಮತ್ತೊಂದು ಸೂತ್ರವನ್ನು ಜಾರಿಗೆ ತರುವುದು ಸಮಾಜದ ಸ್ವಾಸ್ಥ್ಯವನ್ನು ಒಡೆದು ಹಾಕುತ್ತದೆ ಎಂದು ಅಭಿಪ್ರಾಯಿಸಿದರು.

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಬೇಕು, ನಮ್ಮ ಹೋರಾಟಕ್ಕೆ ಕೊನೆಯ ಇಲ್ಲದಂತಾಗಿದೆ. ಇಂದಿನ ಆಡಳಿ ವ್ಯವಸ್ಥೆ ನಮ್ಮನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡುತ್ತಿದೆ ಎಂದು ಹೇಳಿದರು.

ಸಾಹಿತಿ ರತಿರಾವ್ ಮಾತನಾಡಿ, ಬಹುತ್ವವಾದದ ವಿರುದ್ಧ ಹಿಂದುತ್ವವಾದಿಗಳು ತಮಗೆ ಇಷ್ಟ ಬಂದ ರೀತಿಯ ಕಾನೂನನ್ನು ಜಾರಿಗೆ ತರುತ್ತಿರುವುದು ದೇಶಕ್ಕೆ ಅಪಾಯ, ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಕರಪತ್ರ ಚಳವಳಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಸಾಹಿತಿ ರತಿರಾವ್, ಪ್ರಗತಿಪರ ಚಿಂತಕ ಡಾ.ತುಕಾರಾಂ, ಬಸವರಾಜು ದೇವನೂರು, ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ, ಗೋಪಾಲಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ರಾಜಶೇಖರ ಕೋಟೆ, ದಸಂಸ ತಾಲ್ಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್,  ದೇವನೂರ ಪುಟ್ಟನಂಜಯ್ಯ,  ಪ್ರಸನ್ನ ತಳೂರು, ಮಂಜುನಾಥ್ ಮುರುಡಗಳ್ಳಿ, ಗಾಂಧಿನಗರ ರಮೇಶ್, ಕುಮಾರ್ ಬೊಮ್ಮೇನಹಳ್ಳಿ   ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮತಾಂತರ ನಿಷೇಧ ಕಾಯ್ದೆ ವಿರುದ್ಧ ಇಂದಿನಿಂದ ಪ್ರಾರಂಭವಾದ ಕರಪತ್ರ ಚಳವಳಿ ಎಪ್ರಿಲ್ 14 ರವರೆಗೂ ನಿರಂತರವಾಗಿ ನಡೆಯಲಿದೆ. ಈಗಾಗಲೆ 8 ಲಕ್ಷ ಕರಪತ್ರ ಮುದ್ರಿಸಿದ್ದು, ಜಿಲ್ಲೆಯ ತಾಲ್ಲೂಕು ಮಟ್ಟದಲ್ಲೂ ಹಂಚಲಾಗುತ್ತದೆ. ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲದು.

  -ಕಲ್ಲಹಳ್ಳಿ ಕುಮಾರ್, ದಸಂಸ ಮೈಸೂರು ತಾಲೂಕು ಸಂಚಾಲಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News