ಚುನಾವಣೆ ಬಂದರೆ ಕಾಂಗ್ರೆಸ್‍ನವರಿಗೆ ಎಲ್ಲ ನದಿಗಳ ಹೆಸರೂ ನೆನಪಾಗುತ್ತದೆ: ಸಚಿವ ಆರ್.ಅಶೋಕ್

Update: 2022-01-26 14:20 GMT

 ಬೆಂಗಳೂರು, ಜ. 26: `ಚುನಾವಣೆ ಬಂದರೆ ಕಾಂಗ್ರೆಸ್‍ನವರಿಗೆ ಎಲ್ಲ ನದಿಗಳ ಹೆಸರೂ ನೆನಪಾಗುತ್ತದೆ. ಚುನಾವಣೆ ಸಮಯದಲ್ಲಿ ಎಲ್ಲ ನದಿಗಳ ಮೇಲೂ ಅವರಿಗೆ ಪ್ರೀತಿ. ಚುನಾವಣೆ ಮುಗಿದ ಮೇಲೆ ಯಾವ ನದಿಯ ಹೆಸರೂ ಅವರಿಗೆ ನೆನಪಿರುವುದಿಲ್ಲ. ಯಾವ ನದಿ ಎಲ್ಲಿ ಹುಟ್ಟುತ್ತದೆ? ಎಲ್ಲಿ ಹರಿಯುತ್ತದೆ? ಎಂಬುದು ಗೊತ್ತಿರುವುದಿಲ್ಲ' ಎಂದು  ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೂರ್ಯ-ಚಂದ್ರ ಇರುವವರೆಗೂ ಪಕ್ಷ ಬಿಟ್ಟುಹೋದ ಯಾರನ್ನೂ ಪುನಃ ಸೇರಿಸಿಕೊಳ್ಳುವುದಿಲ್ಲ ಎಂದವರು ಸಿದ್ದರಾಮಯ್ಯ. ಈಗ ನಮ್ಮ ಸಂಪರ್ಕದಲ್ಲಿ ಇದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಅವರು ಶಾಸಕರ ಹೆಸರನ್ನು ಮೊದಲು ಹೇಳಲಿ. ಅವಾಗ ನಮ್ಮ ಜೊತೆ ಯಾರು ಬರುತ್ತಾರೆ ಎನ್ನುವುದನ್ನು ಬಹಿರಂಗಪಡಿಸುತ್ತೇವೆ' ಎಂದು ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

`ಕಾಂಗ್ರೆಸ್‍ನ 20 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸಂಪರ್ಕದಲ್ಲಿ ನಮ್ಮವರು ಯಾರೂ ಇಲ್ಲ. ಸಿದ್ದರಾಮಯ್ಯ ಕುಚೋದ್ಯದ ಹೇಳಿಕೆ ಕೊಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ಮೊಟಕಾಗಿದ್ದು ಅವರಿಗೆ ಅಪಶಕುನವಾಗಿದೆ. ಅದರಿಂದ ಕಾಂಗ್ರೆಸ್ ನಾಯಕರಿಗೆ ಭ್ರಮನಿರಸನವಾಗಿದೆ' ಎಂದು ಟೀಕಿಸಿದರು.

`ಜಿಲ್ಲಾ ಉಸ್ತುವಾರಿ ವಿಚಾರವಾಗಿ ಮಾತನಾಡಿದ ಅವರು `ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಜೊತೆ ಚರ್ಚಿಸಿಯೇ ನಿರ್ಣಯ ಮಾಡಿದ್ದಾರೆ. ಉಸ್ತುವಾರಿ ಹಂಚಿಕೆಯಲ್ಲಿ ಗೊಂದಲ ಇಲ್ಲ. ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬಿಟ್ಟುಕೊಟ್ಟಿದ್ದೆ. ಯಡಿಯೂರಪ್ಪ ಅವಧಿಯಲ್ಲೂ ಉಸ್ತುವಾರಿ ಇರಲಿಲ್ಲ. ಈಗಲೂ ಇಲ್ಲ. ನನ್ನ ಇಲಾಖೆಯಲ್ಲಿಯೇ ಮಾಡಲು ಸಾಕಷ್ಟು ಕೆಲಸ ಇದೆ. ಉಸ್ತುವಾರಿ ವಿಚಾರದಲ್ಲಿ ಗೊಂದಲ ಇಲ್ಲ' ಎಂದು ಹೇಳಿದರು.

`ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಎಲ್ಲ ಸುಳ್ಳು ಸುದ್ದಿಗಳು. ಕೆಲವರು ಜ್ಯೋತಿಷ್ಯ ಹೇಳಿ, ಇನ್ನು ಕೆಲವರು ಈ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನೂ ವರಿಷ್ಠರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದು ಗಾಳಿ ಸುದ್ದಿ, ಗಾಳಿಯಲ್ಲೆ ಹರಿದು ಹೋಗುವ ಸುದ್ದಿ. ಬದಲಾವಣೆ ಸಂಬಂಧ ನಮ್ಮ ಪಕ್ಷದಲ್ಲಿ ಚರ್ಚೆ ಇಲ್ಲ. ಅಸಂಬದ್ಧ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದಾರೆ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಸಿಎಂ ಆಗಿ ಇರುತ್ತಾರೆ. ಮುಂದಿನ ಚುನಾವಣೆಯೂ ಬೊಮ್ಮಾಯಿಯವರ ನೇತೃತ್ವದಲ್ಲೇ ನಡೆಸುತ್ತೇವೆ' ಎಂದು ಅಶೋಕ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News