ಮೋದಿ ಹೊಳೆಯುವ ಸೇಬು, ಕಾಂಗ್ರೆಸ್ ಕೊಳೆತ ಮಾವಿನ ಹಣ್ಣಿನಂತೆ: ಸಚಿವ ಈಶ್ವರಪ್ಪ ಟೀಕೆ

Update: 2022-01-26 15:16 GMT

ಚಿಕ್ಕಮಗಳೂರು, ಜ.26: ಕಾಂಗ್ರೆಸ್ ಪಕ್ಷ ಕೊಳೆತ ಮಾವಿನಹಣ್ಣು, ಗೆದ್ದಲು ತಿಂದ ಮರದಂತಾಗಿದೆ. ಅಂತಹ ಪಕ್ಷವನ್ನು ಯಾರುತಾನೆ ಸೇರಲು ಬಯಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. 

ಬುಧವಾರ ನಗರದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಬಯಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿ ಕ್ರಿಯಿಸಿದ ಅವರು, ಮೋದಿ ಹೊಳೆಯುವ ಸೇಬಿನ ಹಣ್ಣಿನಂತೆ. ಆ ಹಣ್ಣನ್ನು ಹುಡುಕಿಕೊಂಡು ವಿವಿಧ ಪಕ್ಷಗಳ ಮುಖಂಡರು ಬಿಜೆಪಿಯತ್ತ ಬರುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಓರ್ವ ಶಾಸಕನ ಹೆಸರನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಲಿ ಎಂದು ಸವಾಲು ಹಾಕಿದರು.

ಸಿದ್ಧರಾಮಯ್ಯ ಅವರಿಗೆ ಸಿಎಂ ಸ್ಥಾನ, ವಿರೋಧ ಪಕ್ಷದ ಸ್ಥಾನ ಬಿಟ್ಟರೇ ಪಕ್ಷಕ್ಕಾಗಿ ದುಡಿಯುವ ಮನಸ್ಸಿಲ್ಲ, ಸೋನಿಯಾಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದರೂ ಅವರು ಸಿಎಂ ಸ್ಥಾನಕ್ಕಾಗಿ ಇಲ್ಲಿಯೇ ಉಳಿದಿದ್ದಾರೆ. ಬಿಜೆಪಿ ಪಕ್ಷದ ಸಿ.ಟಿ.ರವಿ ಪಕ್ಷ ಸಂಘಟನೆಗಾಗಿ ಮಂತ್ರಿ ಸ್ಥಾನ ತೊರೆದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು, ಅಧಿಕಾರವಿಲ್ಲದೇ ಹತಾಶರಾಗಿರುವ ಸಿದ್ದರಾಮಯ್ಯ, ಡಿಕೆಶಿ ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ನಾಟಕ ಆಡಿದರು. ಈಗ ಮಹಾದಾಯಿ ಪಾದಯಾತ್ರೆ ಎನ್ನುತ್ತಿದ್ದಾರೆ ಎಂದರು. 

ನಾನು ನೀರಾವರಿ ಮಂತ್ರಿಯಾಗಿದ್ದಾಗ ಖರ್ಗೆ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಅವರು ದಿಲ್ಲಿಯಲ್ಲಿ ಸೋನಿಯಾಗಾಂಧಿ ಭೇಟಿಮಾಡಿ ಕಳಸ ಬಂಡೂರಿ ಯೋಜನೆಗೆ ಗೋವಾ ರಾಜ್ಯ ಬೆಂಬಲ ನೀಡಲಿದೆ ಹೇಳಿದ್ದರು. ಗೋವಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೋನಿಯಾಗಾಂಧಿ ಕರ್ನಾಟಕಕ್ಕೆ ಒಂದು ಹನಿನೀರೂ ಕೊಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಸುಳ್ಳೆಂದು ಸಾಭೀತು ಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಬೇರೆ ಪಕ್ಷಕ್ಕೆ ಸಚಿವರು ಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿ ಟಿಕೆಟ್ ನೀಡಲು ಜರಡಿ ಹಿಡಿಯುತ್ತಿರುವುದರಿಂದ ಟಿಕೆಟ್ ಸಿಗುವುದಿಲ್ಲವೆಂದು ತಿಳಿದವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಹಾಗೆಯೇ ಬೇರೆ ಪಕ್ಷದವರು ಬಿಜೆಪಿ ಸೇರುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಕತೆ ಮುಗಿದಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಲ್ಲಿ ಕಾಂಗ್ರೆಸ್ ಕತೆ ಮುಗಿಸುತ್ತಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News