ವಿಧಾನಸಭೆ ಚುನಾವಣೆ: "8-10 ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇದೆ" ಎಂದ ಸಿದ್ದರಾಮಯ್ಯ
ಬೆಂಗಳೂರು, ಜ.26: 8-10 ಕ್ಷೇತ್ರಗಳಿಂದ ನನಗೆ ಸ್ಪರ್ಧೆ ಮಾಡುವಂತೆ ಆಹ್ವಾನ ಇದೆ. ನಾನು ಯಾವುದೆ ತೀರ್ಮಾನ ಮಾಡಿಲ್ಲ. ಹೈಕಮಾಂಡ್ ನನಗೆ ಎಲ್ಲಿ ನಿಲ್ಲುವಂತೆ ಹೇಳುತ್ತಾರೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಬಾದಾಮಿ, ಚಾಮರಾಜಪೇಟೆ, ಕೋಲಾರ, ಹುಣಸೂರು, ಕೊಪ್ಪಳ, ಹೆಬ್ಬಾಳ ಕ್ಷೇತ್ರದಿಂದಲೂ ಆಹ್ವಾನವಿದೆ. ಚಾಮುಂಡೇಶ್ವರಿಯವರು ಕರೆಯುತ್ತಿದ್ದಾರೆ. ಆದರೆ, ನಾನೇ ಅಲ್ಲಿ ನಿಲ್ಲಬಾರದು ಅಂದುಕೊಂಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಹೋದವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಧಾನಸಭೆಯಲ್ಲೆ ಹೇಳಿದ್ದೇನೆ. ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ. ನಾನಾಗಿ ಯಾವ ಶಾಸಕರನ್ನೂ ಸಂಪರ್ಕ ಮಾಡಲು ಹೋಗಿಲ್ಲ. ಅವರಾಗಿ ಬಂದರೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್‍ನ ತತ್ವ ಸಿದ್ಧಾಂತವನ್ನು ಒಪ್ಪಿ ಬೇಷರತ್ ಆಗಿ, ಕಾಂಗ್ರೆಸ್ ನಾಯಕತ್ವ ಒಪ್ಪಿಕೊಂಡವರಿಗೆ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಆದರೆ, ಇದು ಕಾಂಗ್ರೆಸ್ ಬಿಟ್ಟು ಹೋದವರಿಗೆ ಅನ್ವಯವಾಗುವುದಿಲ್ಲ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ನಾನು ಯಾವುದೆ ಪ್ರತಿಕ್ರಿಯೆ ನೀಡಲ್ಲ. ಕೆಲವು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ, ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಕಾಂಗ್ರೆಸ್ ಬಿಟ್ಟು ಹೋದವರನ್ನು ಪುನಃ ಸೇರಿಸಿಕೊಳ್ಳುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಯವರ ಸವಾಲುಗಳಿಗೆ ಪ್ರತಿಕ್ರಿಯಿಸಲ್ಲ. ಕೆಲವು ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಬಳಿ ಬಂದು ಮಾತನಾಡಿದ್ದಾರೆ ಅನ್ನೋದನ್ನು ಹೇಳಿದ್ದೇನೆ. ಅವರು ನಾಳೆನೆ ಬಂದು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿಲ್ಲ. ಕೇವಲ ಚರ್ಚೆ ಮಾಡಿದ್ದಾರೆ ಅಷ್ಟೇ. ಇತ್ತೀಚೆಗೆ ಜೆಡಿಎಸ್ ಶಾಸಕ
ಶಿವಲಿಂಗೇಗೌಡ ನಾನು ಸಿದ್ದರಾಮಯ್ಯ ಅವರಿಂದ ಗೆದ್ದಿದ್ದೇನೆ ಎಂದು ಹೇಳಿದ್ದಾರೆ. ನಾನು ಅದನ್ನು ಹೇಳಲು ಹೋಗಿದ್ನಾ? ಅದು ಅವರ ಅಭಿಪ್ರಾಯ ಎಂದು ಅವರು ತಿಳಿಸಿದರು.
ನಾರಾಯಣಗುರುಗೆ ಅವಮಾನ ಅಕ್ಷಮ್ಯ ಅಪರಾಧ: ನಾರಾಯಣಗುರು ಓರ್ವ ದಾರ್ಶನಿಕ. ಅವರು ಯಾವುದೆ ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಈಡಿಗ ಸಮುದಾಯದಲ್ಲಿ ಜನಿಸಿದರು. ಕೇರಳದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿತ್ತು. ಅಸ್ಪøಶ್ಯತೆ ಹೆಚ್ಚಿತ್ತು ಅದನ್ನು ತೊಡೆದು ಹಾಕಲು ಶ್ರಮಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
ನಾರಾಯಣಗುರು ಶಿಕ್ಷಣಕ್ಕೆ ಆದ್ಯತೆ ನೀಡಿದರು. ಮನುಷ್ಯರೆಲ್ಲ ಒಂದೇ, ದೇವರು ಒಬ್ಬನೆ ಎಂದು ಹೇಳಿದ್ದರು. ಯಾವ ದೇವಸ್ಥಾನದಲ್ಲಿ ನಿಮಗೆ ಪ್ರವೇಶ ನಿರಾಕರಿಸುತ್ತಾರೋ, ಅಲ್ಲಿ ನೀವು ಹೋಗದೆ ನೀವೇ ದೇವಸ್ಥಾನ ನಿರ್ಮಿಸಿ ಪೂಜೆ ಮಾಡಿ ಎಂದು ಜಾಗೃತಿ ಮೂಡಿಸಿದಂತಹ ಜಾತ್ಯತೀತ ವ್ಯಕ್ತಿ. ಅಂತಹ ವ್ಯಕ್ತಿಯ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡದ ಕೇಂದ್ರ ಸರಕಾರದ್ದು ಅಕ್ಷಮ್ಯ ಅಪರಾಧ ಎಂದು ಸಿದ್ದರಾಮಯ್ಯ ಕಿಡಿಗಾರಿದರು.