ಶಾಹೀನ್‍ನಿಂದ ‘ಫ್ರೀಡಂ ಫ್ರಂ ಜಂಕ್ ಫುಡ್' ಅಭಿಯಾನ
ಬೀದರ್, ಜ.27: ಆರೋಗ್ಯಪೂರ್ಣ ಆಹಾರ ಕ್ರಮದ ಕುರಿತು ವಿದ್ಯಾರ್ಥಿಗಳು ಹಾಗೂ ಯುವ ಜನರಲ್ಲಿ ಜಾಗೃತಿ ಮೂಡಿಸಲು ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ‘ಫ್ರೀಡಂ ಫ್ರಂ ಜಂಕ್ ಫುಡ್’ಅಭಿಯಾನ ಶುರು ಮಾಡಿದೆ.
ಗಣರಾಜ್ಯೋತ್ಸವ ದಿನವಾದ ಬುಧವಾರ ಆನ್‍ಲೈನ್ ಹಾಗೂ ಆಫ್‍ಲೈನ್‍ನಲ್ಲಿ ಆರಂಭಿಸಿರುವ ಅಭಿಯಾನವು ಜ.31ರವರೆಗೆ ನಡೆಯಲಿದೆ.
ಅಭಿಯಾನದ ಅಂಗವಾಗಿ ದೇಶದ 13 ರಾಜ್ಯಗಳ ಶಾಹೀನ್ ಶಾಲಾ, ಕಾಲೇಜು ಕ್ಯಾಂಪಸ್‍ಗಳಲ್ಲಿ ಆಫ್‍ಲೈನ್ ಹಾಗೂ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಲ್ಲಿ ಕುರ್‍ಕುರೆ, ಚಿಪ್ಸ್, ಪಿಝ್ಝಾ, ಬರ್ಗರ್ ಮೊದಲಾದ ಜಂಕ್‍ಫುಡ್‍ಗಳ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ದೇಶ, ವಿದೇಶಗಳ ಪ್ರಸಿದ್ಧ ವೈದ್ಯರು ಪ್ರತಿ ದಿನ ಪೂರ್ವಾಹ್ನ 11:30ರಿಂದ ಮಧ್ಯಾಹ್ನ 12ರವರೆಗೆ ಶಾಹೀನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಶನ್ಸ್ ಯೂಟ್ಯೂಬ್‍ನಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಜೀರ್ಣ, ಮರೆವು, ಬಲಹೀನತೆ ಸೇರಿದಂತೆ ಜಂಕ್‍ಫುಡ್‍ನಿಂದ ಎದುರಾಗುವ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಉತ್ತಮ ಆರೋಗ್ಯಕ್ಕೆ ಅನುಸರಿಸಬೇಕಾದ ಆಹಾರ ಕ್ರಮಗಳ ಕುರಿತು ಮಾಹಿತಿ ಒದಗಿಸಲಿದ್ದಾರೆ ಎಂದು ಹೇಳಿದ್ದಾರೆ.
ಮೊದಲ ದಿನದ ವಿಶೇಷ ಉಪನ್ಯಾಸದಲ್ಲಿ ಹೈದರಾಬಾದ್‍ನ ಕೆಎಆರ್‍ಇ ಸ್ಕೂಲ್‍ನ ಡಾ.ವಾಹೀದ್ ಅನ್ಸಾರಿ, ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯಪೂರ್ಣ ಆಹಾರದ ಮಹತ್ವ ಮನವರಿಕೆ ಮಾಡಿದ್ದಾರೆ. ಯುಎಇಯ ಡಾ.ತೆಹಸಿನ್ ಅಜಝ್ ಹುಸೇನ್ ಮಲಿಕ್, ಹೈದರಾಬಾದ್‍ನ ಡಾ.ವಿಪಿನ್ ಗೋಯಲ್, ಡಾ.ಬುಶ್ರಾ ಖಾನ್, ಡಾ.ನಾಝ್ನಿನ್ ರಾಣಾ ಹಾಗೂ ಬೀದರ್ ನ ದಾರುಲ್ ಖೈರ್ ಯುನಾನಿ ಆಸ್ಪತ್ರೆಯ ಡಾ.ಅಖೀಲ್ ಅಹ್ಮದ್ ಉಪನ್ಯಾಸ ನೀಡಲಿದ್ದಾರೆ ಎಂದು ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಆಹಾರ ಕ್ರಮವು ಉತ್ತಮವಾಗಿದ್ದರೆ ಮಾತ್ರ ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆ ಸಾಧ್ಯವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಹಿಂದಿನಿಂದಲೂ ಶಿಕ್ಷಣದ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತ ಬಂದಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.