ಹಾವು ಕಡಿತಕ್ಕೆ ಔಷಧ ಸಿಗದೇ ಮಹಿಳೆ ಮೃತಪಟ್ಟಿದ್ದಾರೆಂಬುದು ಸುಳ್ಳು: ಡಾ.ಉಮೇಶ್ ಸ್ಪಷ್ಟನೆ

Update: 2022-01-27 12:11 GMT
ಡಾ.ಉಮೇಶ್

ಚಿಕ್ಕಮಗಳೂರು: ಹಾವು ಕಡಿತಕ್ಕೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಇಲ್ಲ ಎಂಬುದು ಸುಳ್ಳು. ಈ ಸಂಬಂಧ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಔಷಧ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ತಿಳಿಸಿದ್ದಾರೆ.

ಹಾವು ಕಡಿತಕ್ಕೊಳಗಾಗಿದ್ದ ಮಹಿಳೆಯೊಬ್ಬರು ಸಕಾಲದಲ್ಲಿ ಹಾವು ಕಡಿತಕ್ಕೆ ಔಷಧ ಸಿಗದೇ ಸಾವನ್ನಪ್ಪಿದ್ದಾರೆ ಎಂಬ ಆರೋಪ ಸಂಬಂಧ ಸ್ಪಷ್ಟೀಕರಣ ನೀಡಿರುವ ಅವರು, ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಮಹಿಳೆ ಶಾರದಾಂಭ ಎಂಬವರಿಗೆ ವಿಷಕಾರಿ ಹಾವು ಕಚ್ಚಿದ್ದು, ಮೂಡಿಗೆರೆ, ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಗಳಲ್ಲಿ ಔಷಧ  ಸಿಗದ ಕಾರಣದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ತಪ್ಪು ಮಾಹಿತಿಯಾಗಿದೆ. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಎಸ್‍ವಿ ಔಷಧ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ. 

ಹಾವು ಕಡಿತಕ್ಕೊಳಗಾದ ಮಹಿಳೆ ಔಷಧ ಪಡೆದೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ. ಔಷಧ ಕೊರತೆಯಿಂದ ಮೃತಪಟ್ಟಿದ್ದಾರೆಂದು ಮಾದ್ಯಮಗಳಲ್ಲಿ ಸುದ್ದಿಯಾಗಿರುವುದು ತಪ್ಪು ಮಾಹಿತಿಯಾಗಿದೆ. ಜಿಲ್ಲೆಯಲ್ಲಿ 850 ವಾಯಿಲ್ ಎವಿಎಸ್ ಔಷಧ ದಾಸ್ತಾನು ಇದೆ. ಶಾರದಮ್ಮ ಔಷಧ ಸಿಗದೇ ಮೃತಪಟ್ಟಿಲ್ಲ. ಮೂಡಿಗೆರೆ ಆಸ್ಪತ್ರೆಯಲ್ಲಿ ಅವರಿಗೆ ಹಾವು ಕಡಿತಕ್ಕೆ ಔಷಧ ನೀಡಲಾಗಿದೆ. ಸಕಾಲದಲ್ಲಿ ಆಸ್ಪತ್ರೆಗೆ ಬಾರದಿರುವುದರಿಂದ ಔಷಧ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದಿದ್ದಾರೆ. 

ಮೇಲಾಧಿಕಾರಿಗಳ ಆದೇಶದ ಮೇರೆಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಾಧಿಕಾರಿಗಳು ಲೋಪ ಎಸಗಿರುವ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News