ಬೆಂಗಳೂರು: ಗಣರಾಜ್ಯೋತ್ಸವದಂದು ʼಸಂವಿಧಾನದ ಪೀಠಿಕೆʼ ವಿತರಿಸಿದ ವಿದ್ಯಾರ್ಥಿಗಳು

Update: 2022-01-28 09:29 GMT
Photo: Indianow.me

ಬೆಂಗಳೂರು: ಕರ್ನಾಟಕದಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಫಾಲ್ಕನ್ ಫೌಂಡೇಶನ್ ಆಯೋಜಿಸಿರುವ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಮುಖ ʼಇಂಡಿಯನ್ ಎಕ್ಸ್‌ಪ್ರೆಸ್ʼ ಸರ್ಕಲ್‌ನಿಂದ ವಿಧಾನ ಸೌಧ, ರಾಜ್ಯ ವಿಧಾನಸಭೆಯವರೆಗೆ ‘ಮುನ್ನುಡಿ ಮಾರ್ಚ್’ ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳು ದಿನದ ವಿಶೇಷತೆಯಾದ "ಭಾರತದ ಸಂವಿಧಾನದ ಪೀಠಿಕೆ"ಯ ಪ್ರತಿಗಳನ್ನು ದಾರಿಹೋಕರಿಗೆ ಹಂಚಿದರು ಮತ್ತು ಅವುಗಳನ್ನು ಓದಲು ಮತ್ತು ಮನೆಯಲ್ಲಿ ತಮ್ಮ ಮೇಜಿನ ಬಳಿ ಇಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ಈ ಪ್ರದೇಶಗಳ ಸುತ್ತಮುತ್ತ ಇರುವ ಪೊಲೀಸ್ ಸಿಬ್ಬಂದಿ ಮತ್ತು ಹಲವಾರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನ ಮುನ್ನುಡಿಯ ಪ್ರತಿಗಳನ್ನು ನೀಡಿದರು.

ವಿದ್ಯಾರ್ಥಿಗಳ ಈ ನೂತನ ಕಾರ್ಯಕವು ಜನಸಾಮಾನ್ಯರ ಗಮನ ಸೆಳೆಯಿತು.

ಬಳಿಕ ವಿದ್ಯಾರ್ಥಿಗಳು ರಾಜ್ಯ ವಿಧಾನಸಭೆಯ ವಿಧಾನ ಸೌಧದ ಮುಂದೆ ಸಂವಿಧಾನದ ಪೀಠಿಕೆಯನ್ನು ಓದಿದರು. "‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ’, ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಮ್ಮ ದೇಶದ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಅದರ ಮೌಲ್ಯಗಳು ಮೇಲುಗೈ ಸಾಧಿಸಲು ನಾವು ಎಲ್ಲಾ ಕಾರ್ಯಗಳನ್ನು ಕೈಗೊಳ್ಳುತ್ತೇವೆ" ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಲ್ಲಾಮಾ ಇಕ್ಬಾಲ್‌ ವಿರಚಿತ ‘ಸಾರೆ ಜಹಾನ್ ಸೆ ಅಚ್ಚಾ, ಹಿಂದುಸ್ತಾನ್ ಹಮಾರಾ’ ಗೀತೆಯನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫಾಲ್ಕನ್ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ಸುಭಾನ್, "ನಿಜವಾದ ರಾಷ್ಟ್ರೀಯತೆಯನ್ನು ಸಂವಿಧಾನದ ಪೀಠಿಕೆಯಲ್ಲಿಯೇ ವಿವರಿಸಲಾಗಿದೆ ಮತ್ತು ಅದನ್ನು ಸ್ವೀಕರಿಸುವ ಹಾಗೂ ಅನುಸರಿಸುವ ಪ್ರತಿಯೊಬ್ಬರೂ ನಿಜವಾದ ರಾಷ್ಟ್ರೀಯವಾದಿಗಳು ಎಂದು ಹೇಳಿದರು. ಧರ್ಮ, ಜಾತಿ, ಪಂಗಡ, ಭಾಷೆಯ ಭೇದವಿಲ್ಲದೆ ಎಲ್ಲರಿಗೂ ಸಮಾನತೆಯ ಭರವಸೆ ನೀಡಿದ ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುತ್ತಮ ಕೃತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ, ಮೌಲಾನಾ ಝಹೀರುದ್ದೀನ್ ಖಾದ್ರಿ ಮಾತನಾಡಿ, "ಇದು ಭಾರತದ ಪ್ರತಿಯೊಂದು ಭಾಗದಲ್ಲೂ ಕಂಡುಬರುವ ‘ಗಂಗಾ ಜಮುನಿ’ ಸಂಸ್ಕೃತಿಯಾಗಿದೆ ಮತ್ತು ಇದು ಭಾರತಕ್ಕೆ ವಿಶೇಷವಾಗಿದೆ ಮತ್ತು ಪ್ರಪಂಚದ ಬೇರೆಲ್ಲಿಯೂ ಇಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News