ಸಿ.ಎಂ.ಇಬ್ರಾಹೀಂ ಸೋತರೂ ಸಂಪುಟ ಸ್ಥಾನಮಾನ ನೀಡಲಾಗಿತ್ತು: ಡಿ.ಕೆ.ಶಿವಕುಮಾರ್

Update: 2022-01-27 13:48 GMT
ಡಿ.ಕೆ.ಶಿವಕುಮಾರ್ / ಸಿ.ಎಂ.ಇಬ್ರಾಹೀಂ 

ಬೆಂಗಳೂರು, ಜ.27:  ಸಿ.ಎಂ.ಇಬ್ರಾಹೀಂ ಹಿರಿಯ ನಾಯಕರು. ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಕಾಲದಲ್ಲಿ ಹಾಲಿ ಶಾಸಕರನ್ನು ಬಿಟ್ಟು ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತ ನಂತರವೂ ಅವರಿಗೆ ಸಂಪುಟ ಸ್ಥಾನಮಾನ ನೀಡಿ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. 

ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ 'ನನ್ನ ಹಾಗೂ ಕಾಂಗ್ರೆಸ್ ಸಂಬಂಧ ಮುಗಿಯಿತು' ಎಂದು ಸಿ.ಎಂ.ಇಬ್ರಾಹೀಂ ನೀಡಿದ ಹೇಳಿಕೆ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಿ.ಎಂ.ಇಬ್ರಾಹೀಂ ಅವರನ್ನು ಸತತ ಎರಡು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಅವರು ಪಕ್ಷದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಸಮಾಧಾನ ಇರುತ್ತದೆ, ಹೀಗಾಗಿ ಅವರು ಮಾತನಾಡಿದ್ದಾರೆ. ಅವರು ನಮ್ಮ ಸ್ನೇಹಿತರು, ನಮಗೆ ಒಳ್ಳೆಯದು ಬಯಸಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಖಂಡಿತವಾಗಿಯೂ ಅವರ ಜತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಗೂ ನಮಗೂ ಮುಗಿದ ಅಧ್ಯಾಯ ಎಂದ ಸಿ.ಎಂ.ಇಬ್ರಾಹೀಂ

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ ಎಂಬ ಸಿ.ಎಂ.ಇಬ್ರಾಹೀಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, 'ಅವರು ಕಾಂಗ್ರೆಸ್ ಪಕ್ಷದ ಸದಸ್ಯರು. ಪಕ್ಷ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ಅವರು ನೋವಿನಿಂದ ಮಾತನಾಡಿದ್ದಾರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು' ಎಂದರು.

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ತಬ್ಬಲಿಯಾಗಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರಶ್ನೆ ಕೇಳಿದಾಗ, 'ಕಾಂಗ್ರೆಸ್‍ನಲ್ಲಿ  ಸಿ.ಎಂ.ಇಬ್ರಾಹೀಂ, ನಾನು, ಸಿದ್ದರಾಮಯ್ಯ ಸೇರಿದಂತೆ ಯಾರೂ ತಬ್ಬಲಿಯಾಗಿಲ್ಲ. ನಾವೆಲ್ಲಾ ಒಂದೇ' ಎಂದು ಪುನರುಚ್ಚರಿಸಿದರು.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹೊತ್ತಲ್ಲಿ, ರೇಸ್ ಕೋರ್ಸ್‍ನಲ್ಲಿ ಅಲ್ಟ್ರಾ ಡರ್ಬಿ ಬೆಂಗಳೂರು ರೇಸ್ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ವಿಚಾರವಾಗಿ ನಾನು ಟ್ವೀಟ್ ಮಾಡಿದ್ದೇನೆ. ನಾವು ರಾಜ್ಯದ ಹಿತಕ್ಕಾಗಿ ಪಾದಯಾತ್ರೆ ಮಾಡಿದಾಗ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ, ಪೊಲೀಸ್ ಮಹಾನಿರ್ದೇಶಕರು, ಗೃಹಮಂತ್ರಿ ಗಮನಹರಿಸಲಿ ಎಂದರು.

ರಾಜ್ಯಾದ್ಯಂತ ಬಿಜೆಪಿ ನಾಯಕರು ಸಾಕಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾರೆ. ರೇಸ್ ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರಕಾರದ ಅಧಿಕಾರಿಗಳು ಇದ್ದಾರೆ. ಇದರಲ್ಲಿ ಸರಕಾರದ ಪಾತ್ರವೂ ಇದೆ. ಸರಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ನೋಡಿಕೊಂಡು, ಈ ವಿಚಾರವಾಗಿ ಕೋರ್ಟ್‍ಗೆ ಮಾಹಿತಿ ನೀಡಬೇಕೋ ಅಥವಾ ನಾವು ಏನು ಮಾಡಬಹುದು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಅವರು ಉತ್ತರಿಸಿದರು.

ಇದನ್ನೂ ಓದಿ: ಸಿ.ಎಂ. ಇಬ್ರಾಹೀಂ ಜೆಡಿಎಸ್ ಗೆ ಬಂದರೆ ಸ್ವಾಗತ - ಎಚ್.ಡಿ.ಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News