ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದ ನ್ಯಾಯಾಲಯ

Update: 2022-01-27 15:03 GMT

ಬೆಂಗಳೂರು, ಜ.27: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಬ್ಬಿಣದ ಅದಿರು ಅಕ್ರಮವಾಗಿ ಮಾರಾಟ ಮಾಡಿದ ಹಾಗೂ ಸರಕಾರಕ್ಕೆ ರಾಯಲ್ಟಿ ಹಾಗೂ ಇತರೆ ತೆರಿಗೆಗಳನ್ನು ನೀಡದೆ ವಂಚಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ತನಿಖಾ ತಂಡ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ಕೋರ್ಟ್, ಈ ಆದೇಶ ಹೊರಡಿಸಿದೆ.

ತನ್ನ ಆದೇಶದಲ್ಲಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕಾರ್ಯದರ್ಶಿ ಕೆ.ಎಂ.ಆಲಿಖಾನ್ ಹಾಗೂ ಬಿ.ವಿ.ಶ್ರೀನಿವಾಸರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ನಿಯಂತ್ರಣಗಳ ಕಾಯ್ದೆಯ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.
2009ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಿತರ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದು ಸಾಗಿಸಿರುವುದು ಪತ್ತೆಯಾಗಿತ್ತು. ಆರೋಪಿತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಸಾವಿರಾರು ಮೆಟ್ರಿಕ್ ಟನ್ ಅದಿರು ಮಾರಾಟ ಮಾಡಿದ್ದರಿಂದ ಸರಕಾರದ ಬೊಕ್ಕಸಕ್ಕೆ 23,89,648 ರೂ. ನಷ್ಟವಾಗಿದೆ ಎಂದು ತನಿಖಾಧಿಕಾರಿ ಆರೋಪಿಸಿದ್ದರು. 

ಅಲ್ಲದೇ, 2015ರಲ್ಲಿ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 379, 409, 420, 468 ಹಾಗೂ 471 ಅಡಿ ದಾಖಲಿಸಿರುವ ಪ್ರಕರಣಕ್ಕೂ ಪಿಸಿಆರ್‍ಗೂ ಪರಸ್ಪರ ಸಂಬಂಧವಿದೆ ಎಂದಿದ್ದ ತನಿಖಾಧಿಕಾರಿ, ಪ್ರಕರಣದ ದೋಷರೋಪ ಪಟ್ಟಿಯನ್ನೂ ಪಿಸಿಆರ್ ಜತೆ ಲಗತ್ತಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್, ಆರೋಪಗಳು ಮೇಲ್ನೋಟಕ್ಕೆ ಕಾಗ್ನಿಸೆನ್ಸ್ ತೆಗೆದುಕೊಳ್ಳಲು ಅರ್ಹವೆನ್ನಿಸಿದ್ದರಿಂದ ನ್ಯಾಯಾಲಯ ಪ್ರಕರಣ ದಾಖಲಿಸಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News