ಚಿಕ್ಕಮಗಳೂರು: ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಸೇವೆಯಿಂದ ವಜಾ ಮಾಡಲು ಆಗ್ರಹಿಸಿ ಧರಣಿ

Update: 2022-01-27 15:45 GMT

ಚಿಕ್ಕಮಗಳೂರು, ಜ.27: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕೂಡಲೇ ಬಂದಿಸಬೇಕು ಹಾಗೂ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಡಿಪಿಎಸ್‍ಒ)ದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಸಂಘದ ಮುಖಂಡರು, ಕಾರ್ಯಕರ್ತರು, ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇರಿಸಲಾಗಿದ್ದ ಡಾ.ಅಂಬೇಡ್ಕರ್ ಭಾವಚಿತ್ರವನ್ನು ತೆರವು ಮಾಡುವ ಮೂಲಕ ಕೋಟ್ಯಂತರ ದಲಿತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಲ್ಲದೇ, ಸಂವಿಧಾನವನ್ನೇ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ದಂಟರಮಕ್ಕಿ ಶ್ರೀನಿವಾಸ್, ದೇಶದ ಎಲ್ಲ ನ್ಯಾಯಾಲಯಗಳು ಭಾರತದ ಅತ್ಯುನ್ನತ ಶ್ರೇಷ್ಟ ಗ್ರಂಥ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾಗಿದ್ದು, ಇಂತಹ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ನ್ಯಾಯಾಧೀಶರು ಹಾಗೂ ವಕೀಲರ ಪಾಲಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಅವರು ದೇವರಿಗೆ ಸಮಾನ ಎಂದೇ ಭಾವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚನೆ ಮಾಡಿಕೊಟ್ಟ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಎಂಬವರು ಗಣರಾಜ್ಯೋತ್ಸವ ದಿನದಂದೇ ಅವಮಾನಿಸಿದ್ದಾರೆ. ಈ ಮೂಲಕ ಅವರು ಇಡೀ ದೇಶ ಹಾಗೂ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಅಲ್ಲದೇ ಕೋಟ್ಯಂತರ ಅಂಬೇಡ್ಕರ್ ಅಭಿಮಾನಿಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಹಾಗೂ ಅದರ ಶಿಲ್ಪಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಾರ್ಯಕ್ರಮದ ಸಂದರ್ಭ ತೆರವು ಮಾಡಲು ಹೇಳಿ ಉದ್ಧಟತನ ಮೆರೆದಿರುವ ಮಲ್ಲಿಕಾರ್ಜುನಗೌಡ ಅವರು ನ್ಯಾಯಾಧೀಶರಾಗಿ ನೊಂದವರಿಗೆ ನ್ಯಾಯ ನೀಡಲು ಸಾಧ್ಯವೇ ಇಲ್ಲ. ಸಂವಿಧಾನ, ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಈ ನ್ಯಾಯಾಧೀಶರ ಕೃತ್ಯ ಸಂಬಂಧ ರಾಜ್ಯ ಸರಕಾರ ಕೂಡಲೇ ದೂರು ದಾಖಲಿಸಿಕೊಂಡು ಬಂಧಿಸಬೇಕು. ಅಲ್ಲದೇ ಸೇವೆಯಿಂದಲೇ ಅಮಾನತು ಮಾಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವು ಮಾಡಲು ಹೇಳಿ ನ್ಯಾಯಾಧೀಶ ಮಲ್ಲಿಕಾರ್ಜುನ್‍ಗೌಡ ಅವರು ದೇಶದ್ರೋಹದ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ವಿರೋಧಿಸುವ ಮನಸ್ಥಿತಿಯ ಇಂತಹ ನ್ಯಾಯಾಧೀಶರು ಬಿಜೆಪಿ, ಸಂಘಪರಿವಾರದ ಕೈಗೊಂಬೆಗಳಾಗಿದ್ದಾರೆ. ಇಂತಹ ಮನಸ್ಥಿತಿಯ ಜನರು ದಲಿತ, ಶೋಷಿತ, ಹಿಂದುಳಿದ ಹಾಗೂ ಮಹಿಳೆಯರ ವಿರೋಧಿಗಳಾಗಿದ್ದು, ಈ ನ್ಯಾಯಾಧೀಶರಿಂದ ನ್ಯಾಯ ಬೇಡಿ ಬರುವ ಜನರಿಗೆ ನ್ಯಾಯ ಸಿಗಲು ಕಂಡಿತ ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರಕಾರ ನ್ಯಾಯಾಧೀಶರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಬಂಧಿಸುವುದಲ್ಲದೇ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ವಕೀಲ ದೊಡ್ಡಯ್ಯ ಮತ್ತಿತರರು ಮಾತನಾಡಿದರು, ವಿವಿಧ ಸಂಘಟನೆಗಳ ಮುಖಂಡರಾದ ಅಂಗಡಿ ಚಂದ್ರು, ಸುರೇಶ್, ಮಂಜುನಾಥ್, ಹುಣಸೇಮಕ್ಕಿ ಲಕ್ಷ್ಮಣ್, ಉಮೇಶ್‍ಕುಮಾರ್, ಲೋಕೇಶ್ ಮಾವಿನಗುಣಿ, ಉದ್ದಪ್ಪ, ಐ.ಎಂ.ಪೂಣೇಶ್, ಕಬ್ಬಿಗೆರೆ ಮೋಹನ್ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು. ಧರಣಿ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News