"ಮಾನವ ಹಕ್ಕುಗಳ ಉಲ್ಲಂಘನೆ": ಉಡುಪಿ ಹಿಜಾಬ್‌ ಪ್ರಕರಣ ಕುರಿತು ಕರ್ನಾಟಕ ಸರಕಾರಕ್ಕೆ ಮಾನವಹಕ್ಕು ಆಯೋಗ ನೋಟಿಸ್‌

Update: 2022-01-27 18:27 GMT

ಹೊಸದಿಲ್ಲಿ, ಜ. 27: ಹಿಜಾಬ್ ಧರಿಸಿ ಉಡುಪಿಯ ಸರಕಾರಿ ಕಾಲೇಜು ಪ್ರವೇಶಿಸಲು 8 ವಿದ್ಯಾರ್ಥಿನಿಯರಿಗೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಗುರುವಾರ ಕರ್ನಾಟಕ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

‘‘ಈ ಪ್ರಕರಣದ ಸತ್ಯಾಂಶಗಳು ಕಳವಳಕಾರಿಯಾಗಿದೆ. ದೂರಿನಲ್ಲಿ ಮಾಡಿರುವ ಆರೋಪ ಶಿಕ್ಷಣದ ಹಕ್ಕನ್ನು ಒಳಗೊಂಡಿರುವ ಗಂಭೀರ ಸ್ವರೂಪದ್ದಾಗಿದೆ. ಆದುದರಿಂದ ಈ ಪ್ರಕರಣ ಸಂತ್ರಸ್ತ ವಿದ್ಯಾರ್ಥಿನಿಯರ ಮಾನವ ಹಕ್ಕುಗಳ ಘೋರ ಉಲ್ಲಂಘನೆಯನ್ನು ಒಳಗೊಂಡಿದೆ’’ ಎಂದು ನೋಟಿಸಿನಲ್ಲಿ ಹೇಳಲಾಗಿದೆ.

ನೋಟಿಸನ್ನು ಉಡುಪಿಯ ಜಿಲ್ಲಾ ಮ್ಯಾಜಿಸ್ಟ್ರೇಟ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಹಾಗೂ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು 8 ವಿದ್ಯಾರ್ಥಿಗಳಿಗೆ ಉಡುಪಿಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ನಿರ್ಬಂಧ ವಿಧಿಸಿ ಸರಿಸುಮಾರು ಒಂದು ತಿಂಗಳು ಕಳೆಯಿತು. ತರಗತಿ ಪ್ರವೇಶಿಸಲು ಹಾಗೂ ಪಾಠಗಳನ್ನು ಕೇಳಲು ವಿದ್ಯಾರ್ಥಿನಿಯರು ಈಗಲೂ ಹೋರಾಟ ನಡೆಸುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿನಿಯರು 16ರಿಂದ 19 ವರ್ಷಗಳ ಒಳಗಿನವರು. ಡಿಸೆಂಬರ್ 31ರಿಂದ ಗೈರು ಹಾಜರು ದಾಖಲಿಸಲಾಗಿದೆ.

ಇದನ್ನೂ ಓದಿ: ನಾವು ಆನ್‌ಲೈನ್ ತರಗತಿಗೆ ಹಾಜರಾಗುವುದಿಲ್ಲ ಎಂದ ವಿದ್ಯಾರ್ಥಿನಿಯರು

ಈ ಬಗ್ಗೆ ಗುಂಪಿನ ಇಬ್ಬರು ವಿದ್ಯಾರ್ಥಿನಿಯರಾದ ಎ.ಎಚ್. ಅಲ್ಮಾಸ್ (18) ಹಾಗೂ ಆಲಿಯಾ ಅಸ್ಸಾದಿ (17) ಈ ನಿರ್ಬಂಧದಿಂದ ತಮ್ಮ ಶಿಕ್ಷಣದ ಯಾವ ರೀತಿ ಪರಿಣಾಮ ಉಂಟಾಗುತ್ತಿದೆ ಎಂಬ ಬಗ್ಗೆ ವಿವರಿಸಿದ್ದಾರೆ.

 ‘‘ನಾವು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದೇವೆ. ಹಿಜಾಬ್ ನಮ್ಮ ನಂಬಿಕೆಯ ಒಂದು ಭಾಗ. ಇದರೊಂದಿಗೆ ನಾವು ಭವಿಷ್ಯ ಹಾಗೂ ಉತ್ತಮ ಜೀವನದ ಬಗ್ಗೆ ನಿರೀಕ್ಷೆ ಇರಿಸಿಕೊಂಡ ವಿದ್ಯಾರ್ಥಿಗಳು. ನಮ್ಮ ಗುರುತು ಹಾಗೂ ಶಿಕ್ಷಣದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಅವರು ಇದ್ದಕ್ಕಿದ್ದಂತೆ ಯಾಕೆ ನಿರೀಕ್ಷಿಸಬೇಕು? ಇದು ನ್ಯಾಯವಲ್ಲ’’ ಎಂದು ಅಲಿಯಾ ಹೇಳಿದ್ದಾರೆ.

ಕೆಲವು ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ. ಪಾಠಗಳು ತಪ್ಪಿ ಹೋಗುವುದರಿಂದ ನಮ್ಮ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅಲ್ಮಾಸ್ ಹೇಳಿದ್ದಾರೆ.

 ‘‘ನಮ್ಮ ಹಾಜರಾತಿ ಕೂಡ ಕಡಿಮೆಯಾಗುತ್ತಿದೆ. ನಾವು ಮುಖ್ಯವಾದ ಪಾಠಗಳನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಇನ್ನು ಕೆಲವೇ ತಿಂಗಳಲ್ಲಿ ಪರೀಕ್ಷೆ ಬರಲಿದೆ. ಇನ್ನು ಮುಂದೆ ಏನು ನಡೆಯುತ್ತದೆ ಎಂಬ ಬಗ್ಗೆ ನಾವು ಆತಂಕಿತರಾಗಿದ್ದೇವೆ’’ ಅಲ್ಮಾಸ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News