ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ಆರೋಪ: ನ್ಯಾಯಾಧೀಶರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಕೀಲರ ಧರಣಿ

Update: 2022-01-27 17:02 GMT

ಮೈಸೂರು,ಜ.27: ರಾಯಚೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ್ದಾರೆನ್ನಲಾದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಸಬೇಕು ಎಂದು ಒತ್ತಾಯಿಸಿ ಮೈಸೂರು ವಕೀಲರ ಸಂಘದಿಂದ ಗುರುವಾರ ಧರಣಿ ನಡೆಸಲಾಯಿತು.

ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಎದುರು ಮೈಸೂರು ಬಾರ್ ಕೌನ್ಸಿಲ್ ಅಧ್ಯಕ್ಷ ಮಹದೇವಸ್ವಾಮಿ ನೇತೃತ್ವದಲ್ಲಿ ನ್ಯಾಲಯಾಲಯದ ಕಲಾಪವನ್ನು ಬಹಿಷ್ಕರಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ನ್ಯಾಯಾಲಯದ ಮುಂಭಾಗ ರಸ್ತೆ ಬಂದ್ ಮಾಡಿ ನ್ಯಾಯಾಲಯದ ಕಲಾಪ ಬಂದ್ ಮಾಡಿ ವಕೀಲರು ಧರಣಿ ನಡೆಸಿದರು.

ಮಲ್ಲಿಕಾರ್ಜುನ್ ಗೌಡ ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದ್ದಲ್ಲದೆ, ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೂ ಅವಮಾನ ಮಾಡಿರುತ್ತಾರೆ. ಇವರು ನ್ಯಾಯಾಧೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ. ಇದು ರಾಯಚೂರು ನ್ಯಾಯಾಧೀಶರ ದೇಶದ್ರೋಹ ಕೃತ್ಯ. ಈ ಕೂಡಲೇ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಿ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: 'ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ': ನ್ಯಾಯಾಧೀಶರಿಂದ ವಿವರಣೆ ಕೇಳಿದ ಹೈಕೋರ್ಟ್

ಇದೇ ವೇಳೆ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಧಿಕ್ಕಾರ ಕೂಗಿದರು. ಮಲ್ಲಿಕಾರ್ಜುನ ಗೌಡ ಅವರನ್ನು ಬಂಧಿಸಿ  ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಶಿವಣ್ಣೇಗೌಡ, ಶಿವಣ್ಣ, ಪುನೀತ್, ಭಾಗ್ಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯಾಯಾಧೀಶರು ಎಂಬುದು ಅತ್ಯಂತ ಉನ್ನತವಾದ ಸ್ಥಾನ. ಇಂತಹ ಸ್ಥಾನಕ್ಕೆ ಕಳಂಕ ತರುವ ನಿಟ್ಟಿನಲ್ಲಿ ರಾಯಚೂರಿನ ನ್ಯಾಯಾಧೀಶರು ನಡೆದುಕೊಂಡಿದ್ದಾರೆ. ಇಂತಹ ಮನಸ್ಥಿತಿ ನ್ಯಾಯಾಧೀಶರು ಮುಂದಿನ ದಿನಗಳಲ್ಲಿ ತಮ್ಮ ಹುದ್ದೆಯಲ್ಲಿ ಮುಂದುವರೆಯಬಾರದು ಎಂಬುದು ನಮ್ಮ ಒತ್ತಾಯ.
- ಎನ್.ಪುನೀತ್, ವಕೀಲರು, ಮೈಸೂರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News