ಮೈಸೂರಿಗೆ 'ಹೆಲಿಟೂರಿಸಂ' ಬೇಡ ಎಂದು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್; ಕಾರಣವೇನು ಗೊತ್ತೇ?

Update: 2022-01-27 17:39 GMT

ಮೈಸೂರು,ಜ.27: ಮೈಸೂರಿನಲ್ಲಿ ಮತ್ತೆ ಹೆಲಿಟೂರಿಸಂ (heli-tourism) ಮಾಡಲು ಹೊರಟಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಗುರುವಾರ ಮೈಸೂರಿನ ಲಲಿತಮಹಲ್ ಪ್ಯಾಲೆಸ್ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ವೇಳೆ ಮಾಧ್ಯಮದೊಂದಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಮೈಸೂರಿನಲ್ಲಿ ಹೆಲಿಟೂರಿಸಂ ಮಾಡಬೇಕಾದರೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ, ಇದರಿಂದ ಪರಿಸರ ನಿಸರ್ಗ ಸಂಪತ್ತು ನಾಶವಾಗುತ್ತದೆ. ಒಂದು ಕಡೆ ಮೃಗಾಲಯ, ಮತ್ತೊಂದು ಕಡೆ ಚಾಮುಂಡಿ ಬೆಟ್ಟ, ಇನ್ನೊಂದು ಕಡೆ ಕೃಷ್ಣರಾಜಸಾಗರ ಈ ಸ್ಥಳಗಳಿಗೆ ತೊಂದರೆ ಉಂಟಾಗುತ್ತದೆ. ಹೆಲಿಟೂರಿಸಂ ಒಂದು ರೀತಿಯ ಅಪಾಯಕಾರಿ ಬೆಳವಣಿಗೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದ ನ್ಯಾಯಾಲಯ 

ಮೈಸೂರಿನಿಂದ ಮುಂದುವರಿದು ಬಿಳಿಗಿರಿರಂಗನ ಬೆಟ್ಟ, ನಾಗರಹೊಳೆ, ಬಂಡಿಪುರ ಈ ಪ್ರದೇಶಗಳಲ್ಲಿ ಹೆಲಿಕ್ಯಾಪ್ಟರ್ ಹಾರಾಡಿಸಿದರೆ ಆಗುವ ದುರಂತ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಈ ಕೂಡಲೇ ಹೆಲಿಟೂರಿಸಂನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ಹೆಲಿಟೂರಿಸಂ ಬೇಡ. ಮರಗಳನ್ನು ಕಡಿದು ಹೆಲಿಟೂರಿಸಂ ಮಾಡಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. 

ಪ್ರತಿಭಟನೆಯಲ್ಲಿ ಕನ್ನಡ ಚಳವಳಿ ಹೋರಾಟಗಾರರಾದ ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News