ನಾಯಕತ್ವ ಬದಲಾವಣೆ ಪ್ರಶ್ನೆಯೆ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Update: 2022-01-27 18:00 GMT

ಬೆಂಗಳೂರು, ಜ. 27: `ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಈ ಸಂಬಂಧ ಮಾಧ್ಯಮಗಳ ವರದಿ ಸತ್ಯ ದೂರ. ಕೆಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸುಳ್ಳು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಅಲ್ಲಗಳೆದಿದ್ದಾರೆ.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಿಎಂ ಬದಲಾವಣೆ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ, ಇದೊಂದು ಶುದ್ಧ ಸುಳ್ಳು, ವದಂತಿ. ಅಂತಹ ವಾತಾವರಣ ಇಲ್ಲಿ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

`ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಬಿಜೆಪಿ ತ್ಯಜಿಸಿ ಯಾರು ಕಾಂಗ್ರೆಸ್‍ಗೆ ಬರುತ್ತಾರೆ ಎಂದರೆ ಅವರ ಬಳಿ ಉತ್ತರ ಇಲ್ಲ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಪೈಪೋಟಿ ಇದೆ. ಡಿಕೆಶಿ ಸುದ್ದಿಗೋಷ್ಠಿ ನಡೆಸಿ, ಅವರು ಬರುತ್ತಾರೆ, ಇವರು ಬರುತ್ತಾರೆ ಅಂತಾರೆ. ಇದನ್ನು ನೋಡಿದ ಸಿದ್ದರಾಮಯ್ಯ ಅಭದ್ರತೆಯಿಂದ ಅವರು ಬರುತ್ತಾರೆ. ಇವರು ಬರುತ್ತಾರೆ ಅಂತಾರೆ, ಇವರ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡುತ್ತಾರೆ ವಿನಃ ಯಾರೂ ಕಾಂಗ್ರೆಸ್ ಸೇರುವುದಿಲ್ಲ' ಎಂದರು.

`ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಅವರಿಂದ ಕೇಳಿ ವಿಚಾರ ಮಾಡುತ್ತೇನೆ. ತಮ್ಮ ಜೊತೆ ಕೈ ಶಾಸಕರು ಸಂಪರ್ಕದಲ್ಲಿರುವ ವಿಚಾರ ಸುಳ್ಳು, ನಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಬೇರೆಯವರ ತರ ನಾನು ಬೇಜವಾಬ್ದಾರಿಯಾಗಿ ಮಾತನಾಡೋಕೆ ಹೋಗುವುದಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News