ತಮ್ಮದೇ ಪಕ್ಷದ ಶಾಸಕರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Update: 2022-01-27 18:11 GMT
 ಪ್ರತಾಪ್ ಸಿಂಹ

ಮೈಸೂರು,ಜ.27: ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗಿಂತ ಸೀನಿಯರ್, ಅವರಿಗಿಂತ ಬುದ್ಧಿವಂತರು, ಜ್ಞಾನಿಗಳು ಎಂದು ಸಂಸದ ಪ್ರತಾಪ್ ಸಿಂಹ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮನೆ ಮನೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಅನುಮತಿ ನೀಡದಂತೆ ಶಾಸಕರೊಬ್ಬರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಪರೋಕ್ಷವಾಗಿ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಹರಿಹಾಯ್ದರು. 

ಮನೆಗಳಲ್ಲಿ ಟ್ಯಾಪ್ ತಿರುಗಿಸಿದರೆ ನಲ್ಲಿ ನೀರು ಹೇಗೆ ಬರುತ್ತದೆ ಅದೇ ರೀತಿ ಗ್ಯಾಸ್ ಸಂಪರ್ಕ ಕಲ್ಪಿಸಲು ಮೋದಿ ಬಯಸಿದ್ದರು. ಆದರೆ ಇದಕ್ಕೆ ಶಾಸಕ ಎಸ್.ಎ.ರಾಮದಾಸ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರಂತೆ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರಿಂದ ಈ ಯೋಜನಗೆ ತಡೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿಯವರ ಬ್ಯಾನರ್ ಅನ್ನು ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ. ಅವರು ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು. ಇದನ್ನು ವಿರೋಧಿಸಿರುವ ನಿಮ್ಮನ್ನು ಮೈಸೂರಿನ ಜನ ಕ್ಷಮಿಸುವುದಿಲ್ಲ, ಇದನ್ನು ತಾಯಿ ಚಾಮುಂಡೇಶ್ವರಿ ಮತ್ತು ಮೈಸೂರಿನ ಜನ ನೋಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇಂತಹ ಚಿಲ್ಲರೆ ರಾಜಕಾರಣ ಮಾಡಬೇಡಿ, ಇದ್ಯಾವುದಕ್ಕೂ ನಾನು ಕೇರ್ ಮಾಡುವುದಿಲ್ಲ, ಕೆ.ಆರ್.ಕ್ಷೇತ್ರದ ಕಸವನ್ನು ಎತ್ತಿಸೋದು ನಾನೆ, ಈ ಯೋಜನೆಯನ್ನು ನಾನೇ ಕಂಪ್ಲೀಟ್ ಮಾಡುತ್ತೇನೆ. ಯಾವುದಕ್ಕೂ ನಾನು ಕೇರ್ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಶಾಸಕ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಕೋಲ್ಡ್ ವಾರ್ ಮುಂದುವರೆದಿದ್ದು, ರಾಮದಾಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News