ಶ್ರೀರಂಗಪಟ್ಟಣ ಮಸೀದಿ ಒಡೆಯಬೇಕೆಂಬ ಹೇಳಿಕೆಗೆ ಈಗಲೂ ಬದ್ಧ: ಕಾಳಿ ಮಠದ ಋಷಿಕುಮಾರ ಸ್ವಾಮಿ

Update: 2022-01-28 10:28 GMT

ಮೈಸೂರು, ಜ.28: ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನು ಒಡೆಯಬೇಕು ಎಂಬ ಹೇಳಿಕೆಗೆ ನಾನೂ ಈಗಲೂ ಬದ್ಧ  ಎಂದು ಕಾಳಿಮಠದ ಋಷಿಕೇಶ ಸ್ವಾಮೀಜಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿ ಪುರಾತನವಾದದ್ದಲ್ಲ. ಅದು ಮೊದಲು ಆಂಜನೇಯನ ದೇವಾಲಯವಾಗಿತ್ತು. ಹಾಗಾಗಿ ಬಾಬರಿ ಮಸೀದಿ ಮಾದರಿಯಲ್ಲಿ ಈ ಮಸೀದಿಯನ್ನು ಒಡೆದು ಹಾಕಬೇಕು ಎಂದು ಋಷಿಕೇಶ ಸ್ವಾಮೀಜಿ ಪುನರುಚ್ಚರಿಸಿದರು.

ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇದರ ವಿರುದ್ಧ ಹೋರಾಟ ಮಾಡುತ್ತೇನೆ. ಈ ರಾಜ್ಯ ಮತ್ತು ದೇಶದ ಎಲ್ಲಾ ರಾಮ ಮತ್ತು ಹನುಮಂತ ಭಕ್ತರ ಬೆಂಬಲ ನನಗಿದೆ ಎಂದು ಅವರು ಹೇಳಿದರು.

ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸುವುದನ್ನೂ ನಿಷೇಧಿಸಬೇಕು. ಶಾಲೆಗಳಿಗೆ ಹೆಣ್ಣು ಮಕ್ಕಳು ಬುರ್ಖಾ ಧರಿಸಿ ಹೋಗುವುದನ್ನೂ ನಿಷೇಧಿಸಬೇಕು. ಏಕೆಂದರೆ ಬುರ್ಖಾ ಧರಿಸುವುದರಿಂದ ಆ ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಋಷಿಕೇಶ ಸ್ವಾಮೀಜಿ, ಮಸೀದಿಗಳಲ್ಲಿ ಮೈಕ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. 

ಶ್ರೀರಂಗಪಟ್ಟಣದಲ್ಲಿರುವ ಮಸೀದಿಯನ್ನು ಒಡೆಯುವ ಬಗ್ಗೆ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ 10 ದಿನಗಳ ಹಿಂದೆ ಋಷಿಕೇಶ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News