ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸ್ವಾಭಿಮಾನ ಬದುಕು: ಸಿಎಂ ಬಸವರಾಜ ಬೊಮ್ಮಾಯಿ

Update: 2022-01-28 13:30 GMT

ಬೆಂಗಳೂರು, ಜ. 28: `ನಮ್ಮ ಗುರಿ ಒಂದೇ, ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸಮಾಜದಲ್ಲಿ ಸ್ವಾಭಿಮಾನದ ಸ್ಥಾನ ಸಿಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಅವರಿಗೂ ಪಾಲು ಸಿಗಬೇಕೆನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸವನ್ನು ಮಾಡುವ ಭರವಸೆಯನ್ನು ಕನ್ನಡದ ಮಹಾಜನತೆಗೆ ಈಗಾಗಲೇ ನೀಡಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರಕಾರ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ನೇತೃತ್ವದ ಸರಕಾರಕ್ಕೆ ಆರು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರಧಾನಿ ಮೋದಿಯವರ ಆಶಯದಂತೆ ಪಕ್ಷದ ವರಿಷ್ಠರು, ಶಾಸಕರು, ಕರ್ನಾಟಕದ ಮಹಾಜನತೆಯ ಆಶಯದಂತೆ ಕರ್ನಾಟಕದ ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆದಿದೆ. ಆರು ತಿಂಗಳಲ್ಲಿ ಹಲವಾರು ಜನಪರವಾದ ಕೆಲಸಗಳನ್ನು ಸರಕಾರ ಮಾಡಿದೆ' ಎಂದು ಹೇಳಿದರು.

'ಮುಂಬರುವ ದಿನಗಳಲ್ಲಿ 'ಭವ್ಯ ಭವಿಷ್ಯ ಇರುವ ಕರ್ನಾಟಕ'ವನ್ನು ಕಟ್ಟುವ ತೀರ್ಮಾನ ಮಾಡಿದ್ದೇವೆ. ನವ ಭಾರತಕ್ಕಾಗಿ ನವ ಕರ್ನಾಟಕ ಎಂಬ ಧ್ಯೇಯವನ್ನಿಟ್ಟುಕೊಂಡು ಸರಕಾರ ಕೆಲಸ ಮಾಡುತ್ತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕ ಮಿತ್ರರು, ಪಕ್ಷದ ಎಲ್ಲ ವರಿಷ್ಠರು, ಪದಾಧಿಕಾರಿಗಳು, ಕಾರ್ಯಕರ್ತರು ಸಹಕಾರ ನೀಡಿದ್ದಾರೆ. ಎಲ್ಲರೂ ಕೋವಿಡ್ ಹಾಗೂ ಪ್ರವಾಹ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣವಾದ ಸಹಕಾರವನ್ನು ಕೊಟ್ಟಿದ್ದಾರೆ' ಎಂದು ಅವರು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News