ಉಡುಪಿ ಸ್ಕಾರ್ಫ್ ವಿವಾದ: ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲು ಪಿಯುಸಿಎಲ್ ಆಗ್ರಹ

Update: 2022-01-28 13:38 GMT

ಬೆಂಗಳೂರು: 'ಉಡುಪಿಯ ಸರಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ 6 ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ತಕ್ಷಣವೇ ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಲು ಮತ್ತು ತರಗತಿಗಳಿಗೆ ಪ್ರವೇಶಿಸಲು ಅನುಮತಿಸಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು' ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಆಗ್ರಹಿಸಿದೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಪಿಯುಸಿಎಲ್-ಕರ್ನಾಟಕ ಅಧ್ಯಕ್ಷ ಪ್ರೊ.ರಾಜೇಂದ್ರ ವೈ.ಜೆ. ಹಾಗೂ ಬೆಂಗಳೂರು ಅಧ್ಯಕ್ಷ ಶುಜಯತುಲ್ಲಾ ಇ. ಅವರು, `ಸ್ಕಾರ್ಫ್ ಧರಿಸಲು ಆಯ್ದುಕೊಂಡ ಕಾರಣ ಆರು ವಿದ್ಯಾರ್ಥಿನಿಯರನ್ನು ಡಿ.31 ರಿಂದ ತರಗತಿಗಳಿಗೆ ಹಾಜರಾಗದಂತೆ ತಡೆಯಲಾಗಿದೆ. ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಮತ್ತು ತರಗತಿಯ ಹೊರಗೆ ನಿಂತು ಪಾಠ ಕೇಳಲು ಪ್ರಯತ್ನಿಸಬೇಕಾದ ಅವಮಾನಕ್ಕೆ ಒಳಗಾಗಿದ್ದಾರೆ. ಸಂವಿಧಾನದ ಪರಿಚ್ಛೇದ 12ರ ಅಡಿಯಲ್ಲಿ ಸರಕಾರಿ ಪಿಯು ಕಾಲೇಜು ರಾಜ್ಯದ ವ್ಯಾಖ್ಯಾನದೊಳಗೆ ಬರುತ್ತದೆ ಮತ್ತು ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳ ಶಿಕ್ಷಣ, ಸಮಾನತೆ, ಅವರ ಧಾರ್ಮಿಕ ನಂಬಿಕೆಯ ಅಭಿವ್ಯಕ್ತಿ ಮತ್ತು ಘನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅದರ ಕರ್ತವ್ಯವಾಗಿದೆ' ಎಂದು ತಿಳಿಸಲಾಗಿದೆ.

'ಬಹುಮುಖ್ಯವಾಗಿ ಸಂವಿಧಾನದ 25ನೆ ಪರಿಚ್ಛೇದ ಧರ್ಮವನ್ನು ಆಚರಿಸಲು, ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ‍್ಯವನ್ನು ನೀಡುತ್ತದೆ ಮತ್ತು ಹಿಜಾಬ್ ಇಸ್ಲಾಮಿಕ್ ನಂಬಿಕೆಯ ಅತ್ಯಗತ್ಯ ಅಂಶವಾಗಿರುವುದರಿಂದ ಹಿಜಾಬ್ ಧರಿಸುವುದನ್ನು ನಿಷೇಧಿಸುವುದು ಪರಿಚ್ಛೇದ 25ರ ಅಡಿಯಲ್ಲಿ ಸಾಂವಿಧಾನಿಕ ಖಾತರಿ ಮೇಲಿನ ದಾಳಿಯಾಗಿದೆ. ಇಂದು ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಕ್ಕು ಚಲಾಯಿಸುವುದನ್ನು ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳ ಮೇಲೆ ದೂರಗಾಮಿ ದಾಳಿಯನ್ನು ಪ್ರಾರಂಭಿಸಲಾಗಿದೆ. ಅದನ್ನು ವಿರೋಧಿಸಬೇಕಾಗಿದೆ' ಎಂದು ತಿಳಿಸಿದ್ದಾರೆ.

`ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ 6 ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದು, ಆ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳಾದ ಸಮಾನತೆ, ತಾರತಮ್ಯ, ಶಿಕ್ಷಣ, ಧಾರ್ಮಿಕ ಅಭಿವ್ಯಕ್ತಿ ಮತ್ತು ಘನತೆಯ ಹಕ್ಕನ್ನು ರಕ್ಷಿಸಬೇಕು. ಜೊತೆಗೆ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ವಿರುದ್ಧ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಬೇಕು' ಎಂದು ಉಭಯ ನಾಯಕರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News