ಸಿ.ಎಂ.ಇಬ್ರಾಹೀಂ ನಿವಾಸಕ್ಕೆ ಭೇಟಿ ನೀಡಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?

Update: 2022-01-28 16:49 GMT
ಎಚ್.ಡಿ.ಕುಮಾರಸ್ವಾಮಿ (PTI)

ಬೆಂಗಳೂರು, ಜ.28: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ಸಿ.ಎಂ.ಇಬ್ರಾಹೀಂ ಅವರ ಬೆನ್ಸನ್‌ಟೌನ್‌ನಲ್ಲಿರುವ ನಿವಾಸಕ್ಕೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿ.ಎಂ.ಇಬ್ರಾಹೀಂ ನಿನ್ನೆ ಕಾಂಗ್ರೆಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದಾರೆ. ಬೇರೆ ಕೆಲವು ವಿಷಯಗಳ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದಾರೆ. ಅಂತಿಮವಾಗಿ ಅವರೇ ಜೆಡಿಎಸ್ ಪಕ್ಷ ಸೇರ್ಪಡೆಯ ತೀರ್ಮಾನ ಮಾಡಬೇಕು. ಅವರ ಮೇಲೆ ಬೇರೆ ಯಾರೂ ಒತ್ತಡ ಹೇರಲು ಆಗುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ರಾಜಕಾರಣಕ್ಕೆ ಬರುವ ಮುಂಚಿನಿಂದಲೂ ದೇವೇಗೌಡರ ಜೊತೆ ಇಬ್ರಾಹೀಂ ಸಂಬಂಧ ಹೊಂದಿದ್ದರು. 1972ರಿಂದಲೂ ಅವರಿಬ್ಬರ ನಡುವೆ ಒಡನಾಟವಿದೆ. ಆ ಸಂಬಂಧದ ಹಿನ್ನೆಲೆಯಲ್ಲಿ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. 

ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿ ಕುರಿತು ಸ್ಪಷ್ಟನೆ ನೀಡಿದ ಜೆಡಿಎಸ್ ಶಾಸಕ ಪುಟ್ಟರಾಜು 

1994ರ ಚುನಾವಣೆಯಲ್ಲಿ ಜನತಾದಳಕ್ಕೆ ಸಂಪೂರ್ಣ ಬಹುಮತ ಬರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆಗ ನಾವು 114 ಸ್ಥಾನ ಗೆದ್ದಿದ್ದೆವು. ಆಗಲೂ ಇಬ್ರಾಹೀಂ ಕಾಂಗ್ರೆಸ್ ತೊರೆದು ಜನತಾದಳ ಸೇರ್ಪಡೆಯಾಗಿದ್ದರು. ಈಗಲೂ ಅದೇ ರೀತಿಯ ಸನ್ನಿವೇಶ ನಿರ್ಮಾಣವಾಗುತ್ತಿರುವುದು ಕಾಕತಾಳೀಯ ಎಂದು ಅವರು ತಿಳಿಸಿದರು.

ಸಿ.ಎಂ.ಇಬ್ರಾಹೀಂಗೆ ರಾಜ್ಯಸಭಾ ಟಿಕೆಟ್ ತಪ್ಪಿಸಿದ್ದು ದೇವೇಗೌಡರು ಎಂದು ಸಿದ್ದರಾಮಯ್ಯ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆಗ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲೆ ಇದ್ದರು. ಇಬ್ರಾಹೀಂ ಅವರ ಮೇಲೆ ಅಷ್ಟೊಂದು ಮಮತೆ ಇದ್ದಿದ್ದರೆ ಹೋರಾಟ ಮಾಡಿ ರಾಜ್ಯಸಭಾ ಸ್ಥಾನ ಕೊಡಿಸಬೇಕಿತ್ತು. ಈ ಘಟನೆಯಾಗಿ ಸುಮಾರು 15 ವರ್ಷ ಆಗಿದೆ. ಸಿದ್ದರಾಮಯ್ಯ ನೀಡುವ ಪ್ರತಿಕ್ರಿಯೆಗೂ ನಮಗೂ ಸಂಬಂಧವಿಲ್ಲ. ನಮ್ಮ ಪಕ್ಷದಲ್ಲಿನ ಬೆಳವಣಿಗೆಯಂತೆ ನಾವು ತೀರ್ಮಾನಗಳನ್ನು ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಸ್ವತಂತ್ರ ಸರಕಾರ ರಚನೆ ಮಾಡಬೇಕು. ಎರಡು ರಾಷ್ಟ್ರೀಯ ಪಕ್ಷಗಳಿಂದ ನೀರಾವರಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನತೆಯ ಮುಂದಿಡಲು ಮಾಹಿತಿಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ನಮ್ಮ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಾಗೂ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News