ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು: ಕೇಂದ್ರಕ್ಕೆ ರೈತ ಸಂಘಟನೆಗಳ ಒಕ್ಕೂಟ ಪತ್ರ

Update: 2022-01-28 15:41 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಜ.28: ಕೇಂದ್ರ ಸರಕಾರದ 2022-23ನೆ ಸಾಲಿನ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪತ್ರ ಬರೆದಿದ್ದಾರೆ.

ರೈತರ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು. ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು. ರೈತರ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಕೃಷಿ ಸಾಲ ನೀತಿ ಬದಲಾಗಬೇಕು. ಕೊರೋನ ಸಂಕಷ್ಟದಲ್ಲಿ ರೈತರು ನಷ್ಟ ಅನುಭವಿಸಿರುವ ಕಾರಣ ಕೃಷಿ ಜಮೀನು ಉಳ್ಳ ಎಲ್ಲ ರೈತರಿಗೂ ಪಹಣಿ ಪತ್ರ ಆಧರಿಸಿ ಕನಿಷ್ಠ 3 ಲಕ್ಷ ರೂ.ಆಧಾರ ರಹಿತ ಬಡ್ಡಿರಹಿತ ಸಾಲ ಸಿಗುವಂತಾಗಬೇಕು. ಕಬ್ಬಿನ ಎಫ್‌ಆರ್‌ಪಿ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಇಳುವರಿ ಮಾನದಂಡ ಬದಲಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಬ್ಬಿಗೆ ಬೆಂಕಿ ಅನಾಹುತ ಸುಟ್ಟು ಹೋದ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು. ಕೃಷಿ ಉತ್ಪನ್ನಗಳಿಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ಕೇವಲ ಆದೇಶವಾಗಿ ಉಳಿಯಬಾರದು. ರೈತರಿಗೆ ಅನುಕೂಲವಾಗುವ ಯೋಜನೆ ಜಾರಿಯಾಗಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ, ಉಪಕರಣಗಳು, ಟ್ರಾö್ಯಕ್ಟರ್ ಬಿಡಿಭಾಗಗಳ ಜಿಎಸ್ಟಿ ತೆರಿಗೆ ರದ್ದುಗೊಳಿಸಬೇಕು. ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು, ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News