ಸಾಮಾಜಿಕ ಜಾಲತಾಣದಲ್ಲಿ ಜೈನಧರ್ಮದ ಅವಹೇಳನ ಆರೋಪ: ದೂರು

Update: 2022-01-28 16:02 GMT

ಕಳಸ, ಜ.28: ಜೈನಧರ್ಮ ಹಾಗೂ ಗೊಮ್ಮಟೇಶ್ವರ ಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್, ಸಂದೇಶ ಹಾಕಿ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಲಾಗುತ್ತಿದೆ ಎಂದು ಆರೋಪಿ ಪಟ್ಟಣ ಜೈನ ಸಮಾಜದ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳಸ ತಾಲೂಕು ಜೈನ ಸಮಾಜದ ಮುಖಂಡ ಬ್ರಹ್ಮದೇವ್ ಎಂಬವರು ಶುಕ್ರವಾರ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆಕಾಶ್ ಲಕ್ಕವಳ್ಳಿ, ರವಿ ಹೊಸಕೆರೆ, ಗುರು ಅಕ್ಕಿ, ನಾಯಕ್ ಉಡುಪಿ, ಕಿರಣ್ ಕೆಜಿಎಫ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಹಿಜಾಬ್ ವಿಚಾರ ಸಂಬಂಧ ಈ ಆರೋಪಿಗಳು ಜೈನಧರ್ಮದ ನಿಂದನೆ ಹಾಗೂ ಗೊಮ್ಮಟೇಶ್ವರ ಸ್ವಾಮಿಗೆ ಸಂಬಂಧಿಸಿದಂತೆ ಅವಹೇಳನಕಾರಿಯಾದ ಪೋಸ್ಟ್, ಸಂದೇಶಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾ ಸಮಾಜದ ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ. ಈ ಮೂಲಕ ಸಮುದಾಯದ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ. ಜೈನ ಸಮುದಾಯ ಅಹಿಂಸಾ ತತ್ವದ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶ್ರಮಿಸುತ್ತಿದೆ. ಈ ಧರ್ಮದ ಅನುಯಾಯಿಗಳು ಅದರಂತೆ ನಡೆದುಕೊಂಡು ಬರುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಜೈನ ಧರ್ಮ ಹಾಗೂ ಅದರ ಅನುಯಾಯಿಗಳು ಆರಾಧಿಸುವ ದೇವರ ಬಗ್ಗೆ ಅವಹೇಳನಕಾರಿಯಾದ ಬರಹಗಳನ್ನು ಪೋಸ್ಟ್ ಮಾಡುತ್ತಾ ಸಮಾಜಿಕ ಜಾಲತಾಣಗಳವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಮಾಜದವರ ನಂಬಿಕೆಯನ್ನು ಹಿಯಾಳಿಸುತ್ತಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಬ್ರಹ್ಮದೇವ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News