ಸಿದ್ದರಾಮಯ್ಯರನ್ನು ಭೇಟಿಯಾದ ಕುರಿತು ಸ್ಪಷ್ಟನೆ ನೀಡಿದ ಜೆಡಿಎಸ್ ಶಾಸಕ ಪುಟ್ಟರಾಜು

Update: 2022-01-28 16:30 GMT
ಶಾಸಕ ಪುಟ್ಟರಾಜು 

ಮಂಡ್ಯ, ಜ.28: ಕ್ಷೇತ್ರದಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದೆ, ರಾಜಕೀಯ ಉದ್ದೇಶವಿಲ್ಲ ಎಂದು ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಗುರುವಾರ ಸಂಜೆ  ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಪುಟ್ಟರಾಜು, ದೇವಾಲಯ ಸಮಿತಿ ತೀರ್ಮಾನದಂತೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಹೋಗಿದ್ದೆ ಎಂದರು.

ಗುರುವಾರ ಸಂಜೆ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದೆ. ಅದೇ ವೇಳೆಗೆ ಎಂ.ಬಿ.ಪಾಟೀಲ್, ಝಮೀರ್ ಅಹ್ಮದ್ ಬಂದರು. ಇದನ್ನು ಗಮನಿಸಿದ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿ.ಎಂ.ಇಬ್ರಾಹೀಂ ನಿವಾಸಕ್ಕೆ ಭೇಟಿ ನೀಡಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?

ರಾಜಕೀಯದ ಬಗ್ಗೆ ಮಾತನಾಡೋದಕ್ಕೆ ಏನಿದೆ? ನಾನು ಜೆಡಿಎಸ್, ಅವರು ಕಾಂಗ್ರೆಸ್. ಹಾಗಾಗಿ ರಾಜಕೀಯ ಚರ್ಚೆ ಏನೂ ಇಲ್ಲ. ಜೆಡಿಎಸ್ ಪಕ್ಷದ ಸಭೆ ಮುಗಿಸಿ ದೇವೇಗೌಡರ ಗಮನಕ್ಕೆ ತಂದು ಸಿದ್ದರಾಮಯ್ಯ ಮನೆಗೆ ಹೋಗಿದ್ದೇನೆ. ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್ ವರಿಷ್ಠರ ಜತೆ ನನಗೆ ಅಸಮಾಧಾನ ಇದೆ ಎಂಬುದು ಊಹಾಪೋಹಾ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯವಾಗಿ ಸಕ್ರಿಯವಾಗಿದ್ದು, ರೈತರ ಪರವಾಗಿ ಹೋರಾಟ ಮಾಡುತ್ತಾರೋ ಅಲ್ಲಿಯವರೆಗೂ ನಾನು ಅವರ ಜತೆಗೆ ಇರುತ್ತೇನೆ. ದೇವೇಗೌಡರು ಯಾವಾಗ ರಾಜಕೀಯ ಬೇಡ ಅಂತಾರೆ ಆಗ ನನ್ನ ರಾಜಕೀಯ ಯಾತ್ರೆಯೂ ಮುಗಿಯುತ್ತದೆ ಎಂದು ಅವರು ಹೇಳಿಕೊಂಡರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News