ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರುವುದು ಎಂಟನೇ ಅದ್ಭುತ: ಸತೀಶ್ ಜಾರಕಿಹೊಳಿ
ಬೆಳಗಾವಿ, ಜ. 29: `ಜಿಲ್ಲೆಯ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಪುನಃ ಕಾಂಗ್ರೆಸ್ ಸೇರುವುದು ಜಗತ್ತಿನ ಎಂಟನೆ ಅದ್ಭುತ. ಸದ್ಯ ಬಿಜೆಪಿಯಲ್ಲಿದ್ದು, ಅಲ್ಲೇ ಇದ್ದರೆ ಸೂಕ್ತ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ವಿಷಯ ನನಗೆ ಗೊತ್ತಿಲ್ಲ. ಇತರ ಪಕ್ಷಗಳ ಹಲವರು ಕಾಂಗ್ರೆಸ್ ಸೇರುವುದು ನಿಜ. ಆದರೆ, ಅದೆಲ್ಲವೂ ಬೆಂಗಳೂರು ಹಂತದಲ್ಲಿ ನಡೆಯುತ್ತದೆ. ಯಾರ್ಯಾರು ಪಕ್ಷಕ್ಕೆ ಬರುತ್ತಾರೆಂಬ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಇಲ್ಲ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
`ವಿಧಾನಸಭಾ ಚುನಾವಣೆ ಸಮೀಪಿಸಿದ ನಂತರ ಪಕ್ಷಾಂತರ ಪರ್ವವು ಆರಂಭವಾಗಲಿದೆ. ಸದ್ಯಕ್ಕೆ ಸೀಟು ಬ್ಲಾಕ್ ಮಾಡುವ ಕೆಲಸವಷ್ಟೆ ನಡೆಯುತ್ತಿದೆ. ಆದರೆ, ಸದ್ಯಕ್ಕೆ ಆಸನ ಖಚಿತವಾಗುವುದಿಲ್ಲ' ಎಂದು ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ಪೂರಕವಾಗಿ ಬೆಳಗಾವಿ ಜಿಲ್ಲೆಯಲ್ಲಿ 12ರಿಂದ 13 ಕ್ಷೇತ್ರಗಳಲ್ಲಿ ಗೆಲ್ಲಲು ತಯಾರಿ ನಡೆಸಿದ್ದೇವೆ' ಎಂದರು.
`ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗೋವಾದಲ್ಲಿ ಕಳೆದ ಬಾರಿ 17 ಸೀಟು ಗೆಲ್ಲಲಾಗಿತ್ತು. ಇನ್ನೂ ಸ್ವಲ್ಪ ಆಸಕ್ತಿ ವಹಿಸಿದ್ದರೆ ಸರಕಾರ ರಚಿಸಬಹುದಿತ್ತು. ಆದರೆ, ಕಾರಣಾಂತರಗಳಿಂದ ಸರಕಾರ ರಚಿಸಲಿಲ್ಲ. ಕಾಂಗ್ರೆಸ್ ಮತ ಬ್ಯಾಂಕ್ ಅಲ್ಲಿದೆ. ಆದುದರಿಂದ ಈ ಬಾರಿ ಗೋವಾ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸಲಿದ್ದೇವೆ' ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
`ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ನಮ್ಮ ಸರಕಾರವಿದ್ದಾಗ ಮೂರು, ನಾಲ್ಕು ಜನ ಅಲ್ಪಸಂಖ್ಯಾತ ಸಮಾಜದವರೇ ಮಂತ್ರಿಗಳಾಗಿದ್ದರು. ನಾಮನಿರ್ದೇಶನ ಸಂದರ್ಭದಲ್ಲೂ ಆದ್ಯತೆ ಕೊಡಲಾಗಿದೆ' ಎಂದು ಅವರು ತಿಳಿಸಿದರು.