''ಸಚಿವರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ'': ಸ್ವಪಕ್ಷೀಯ ಶಾಸಕರಿಂದಲೇ ಸಿಎಂ ಬೊಮ್ಮಾಯಿಗೆ ದೂರು
ಬೆಂಗಳೂರು, ಜ. 29: `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಆರು ತಿಂಗಳ ಪೂರೈಸಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಒತ್ತಾಯದ ಬೆನ್ನಲ್ಲೆ ಇದೀಗ ಸಚಿವರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಖುದ್ದು ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದಾರೆ.
ಶನಿವಾರ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ಸಲ್ಲಿಸಿದ್ದು, ಸಚಿವರ ಕಾರ್ಯವೈಖರಿ ವಿರುದ್ಧ ಪಕ್ಷದ ವರಿಷ್ಠರಿಗೂ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, `ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ 14 ತಿಂಗಳು ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಸಚಿವರು ನಮ್ಮ ಯಾವುದೇ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಮೊಬೈಲ್‍ಫೋನ್ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ ಖುದ್ದಾಗಿ ಭೇಟಿಯಾಗಿ ಪತ್ರಗಳನ್ನು ಕೊಟ್ಟರೆ ಆಪ್ತ ಸಹಾಯಕರಿಂದ ಸಹಿ ಮಾಡಿಸಿ ಅಧಿಕಾರಿಗಳಿಗೆ ಕೊಡುತ್ತಾರೆ. ಕ್ಷೇತ್ರದ ಯಾವುದೇ ಕೆಲಸಗಳು ಆಗುತ್ತಿಲ್ಲ. ನಾವು ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಗಳನ್ನು ನೀಡಿದರೂ ಸಚಿವರು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ಆಗದಿದ್ದರೆ ನಾವು ಹೇಗೆ ಕ್ಷೇತ್ರದ ಜನರ ಎದುರು ಮುಖ ಹೊತ್ತು ತಿರುಗಾಡಬೇಕು' ಎಂದು ಪ್ರಶ್ನಿಸಿದರು.
`ಕೆಲವರಿಗೆ ನಮ್ಮಿಂದಲೇ ಸರಕಾರ ಬಂದಿದೆ ಎಂಬ ಅಹಂ ಇದೆ. ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಕನಿಷ್ಟ ಪಕ್ಷ ಫೋನ್‍ಕಾಲ್ ಸ್ವೀಕಾರ ಮಾಡಬೇಕು. ನಮ್ಮ ಕ್ಷೇತ್ರಗಳ ಕೆಲಸ ಮಾಡಿಕೊಡುವಂತೆ ಸಚಿವರಿಗೆ ಸೂಚನೆ ಕೊಡಬೇಕು. ಎಲ್ಲಕ್ಕೂ ನಾವು ಅಧಿಕಾರಿಗಳು ಮತ್ತು ಸಚಿವರ ಆಪ್ತ ಸಹಾಯಕರು, ಸಹಾಯಕರನ್ನು ಕೇಳಲು ಆಗುವುದಿಲ್ಲ. ಈ ಕುರಿತು ಸಿಎಂ, ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
`ಖುದ್ದು ಶಾಸಕರೇ ಕೆಲಸ ಮಾಡಿಕೊಡಿ ಎಂದು ಕೇಳಿಕೊಂಡರೂ ಸಚಿವರು ಸ್ಪಂದಿಸುತ್ತಿಲ್ಲ. ಶಾಸಕರ ನಿರೀಕ್ಷೆ ಈಡೇರುತ್ತಿಲ್ಲ. ಈಗಿನ ಸರಕಾರದಲ್ಲೂ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಚಿವರೆಂದರೆ ಅವರೇನು ದೇವಲೋಕದಿಂದ ಇಳಿದು ಬಂದವರಲ್ಲ. ನಾವು ಜನರಿಂದಲೇ ಆಯ್ಕೆಯಾಗಿ ಬಂದಿದ್ದೇವೆ. ಇನ್ನೂ ಕೆಲ ಸಚಿವರು ಕೈಗೆ ಸಿಗುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳುವ ಸೌಜನ್ಯವೂ ಕೆಲವರಲ್ಲಿ ಇಲ್ಲ' ಎಂದು ಅವರು ಅಳಲು ತೋಡಿಕೊಂಡರು. ಇತ್ತೀಚೆಗೆ ಸಚಿವರೊಬ್ಬರಿಗೆ ಕರೆ ಮಾಡಿದ್ದರೆ ಐಸೋಲೇಷನ್‍ನಲ್ಲಿ ಇರುವುದಾಗಿ ಸುಳ್ಳು ಹೇಳಿದರು. ಆದರೆ, ಅದೇ ಸಚಿವರು ಅಂದು ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು ಎಂದು ರೇಣುಕಾಚಾರ್ಯ ದೂರಿದರು.
ಶೀಘ್ರದಲ್ಲೆ ಸಭೆ: ಶಾಸಕರ ಅಸಮಾಧಾನವನ್ನು ಆಲಿಸಿದ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಶೀಘ್ರದಲ್ಲೆ ಈ ಸಂಬಂಧ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಚಿವರು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಲಾಗುವುದು ಅನಿವಾರ್ಯ ಆಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.