ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ: ಚಿಕ್ಕಮಗಳೂರು ನಗರಸಭೆ ರಾಜ್ಯಕ್ಕೆ ಪ್ರಥಮ

Update: 2022-01-30 07:35 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಶಾಲೆಬಿಟ್ಟ ಮಕ್ಕಳ ಸಮೀಕ್ಷೆಯನ್ನು ನಗರಸಭೆ ಯಶಸ್ವಿಯಾಗಿ ನಡೆಸಿದ್ದು, ಶೇ.100.13ರಷ್ಟು ಗುರಿ ಸಾಧಿಸಿ ರಾಜ್ಯದಲ್ಲೇ ಮೊದಲಸ್ಥಾನ ಪಡೆದುಕೊಂಡಿದೆ. ನಗರದಲ್ಲಿರುವ 27,965 ಮನೆಗಳ ಸರ್ವೇಕಾರ್ಯ ನಡೆಸಬೇಕಿದ್ದು, ಈ ಪೈಕಿ 28,001 ಮನೆಗಳ ಸೇರ್ವೆ ಕಾರ್ಯ ಮುಗಿಸಿ ಗುರಿಗಿಂತ ಹೆಚ್ಚಿನ ಸಾಧನೆ ಮಾಡುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.

ಸರಕಾರಿ ಆದೇಶದಂತೆ ನಗರ ಪ್ರದೇಶದಲ್ಲಿ ಶಾಲೆಬಿಟ್ಟ ಮಕ್ಕಳ ಸಮೀಕ್ಷೆಗೆ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಆಗಸ್ಟ್ ತಿಂಗಳಲ್ಲಿ ಸರ್ವೇ ಕಾರ್ಯಕ್ಕೆ ನಗರಸಭೆ ಸಿಬ್ಬಂದಿ ತಂಡ ರಚಿಸಿ ಕಾರ್ಯಪ್ರವೃತ್ತರಾಗಿದ್ದರು. ಮೊದಲ ಹಂತದಲ್ಲಿ ಶೇ.60ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ನಗರಸಭೆ ಸಿಬ್ಬಂದಿಯ ಕೆಲಸದ ಒತ್ತಡ ಹಾಗೂ ಅನುಭವ ಕೊರತೆಯಿಂದಾಗಿ ಶೇ.40ರಷ್ಟು ಸಮೀಕ್ಷೆ ಕಾರ್ಯವನ್ನು ಶಿವಮೊಗ್ಗ ಮತ್ತು ಭದ್ರಾವತಿಯ 8ರಿಂದ 10 ಜನರ ವಿಶೇಷ ತಂಡದಿಂದ ಮಾಡಿಸಲಾಗಿದೆ. ಈ ತಂಡ  ಸರ್ವೇ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶೇ.100.13ರಷ್ಟು ಸಮೀಕ್ಷೆ ನಡೆಸಿದೆ.

ಓಸಿಸಿ ಸರ್ವೇ ಆ್ಯಪ್ ಬಳಸಿಕೊಂಡು ಸರ್ವೆಕಾರ್ಯ ಮಾಡಲಾಗಿದ್ದು, ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿರುವ ಮಕ್ಕಳನ್ನು ಪತ್ತೆಹಚ್ಚುವ ಸಲುವಾಗಿ ಬೀದಿ ಬದಿ ವ್ಯಾಪಾರಸ್ಥರು, ಕಾರ್ಮಿಕರು, ಮನೆಗೆಲಸಕ್ಕೆ ಹೋಗುವವರು, ಸರಕಾರಿ ಶಾಲೆಯಿಂದ ಹೊರಗುಳಿದ ಮಕ್ಕಳು, ಖಾಸಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ನಡೆಸಲಾಗಿದೆ. ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಶಾಲೆಬಿಟ್ಟ ಮಕ್ಕಳು ಕಂಡು ಬಂದಿಲ್ಲ ಎಂಬುದು ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ. 

ಜಿಲ್ಲೆಯ ಶೃಂಗೇರಿ ಪಟ್ಟಣ ಪಂಚಾಯತ್, ತರೀಕೆರೆ ಪುರಸಭೆ, ಕೊಪ್ಪ ಪಟ್ಟಣ ಪಂಚಾಯತ್, ಕಡೂರು ಪುರಸಭೆ, ಅಜ್ಜಂಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಮೂಡಿಗೆರೆ ಪಟ್ಟಣ ಪಂಚಾಯತ್, ನರಸಿಂಹರಾಜಪುರ ಪಟ್ಟಣ ಪಂಚಾಯತ್, ಬೀರೂರು ಪುರಸಭೆ ನಿಗಧಿತ ಪ್ರಗತಿ ಸಾಧಿಸಬೇಕಿದೆ.

ಮೂಡಿಗೆರೆ ಪಟ್ಟಣದಲ್ಲಿ 2,447 ಮನೆ ಸಮೀಕ್ಷೆ ನಡೆಸಬೇಕಿದ್ದು, 1,848 ಮನೆಗಳ ಸಮೀಕ್ಷೆ ನಡೆಸಿದೆ. 599 ಮನೆಗಳ ಸರ್ವೇ ಬಾಕಿ ಇದೆ. ಶೇ.75.52ರಷ್ಟು ಪ್ರಗತಿಯಾಗಿದೆ. ನರಸಿಂಹರಾಜಪುರ 1,650 ಮನೆಗಳ ಸಮೀಕ್ಷೆ ನಡೆಸಬೇಕಿದ್ದು, 1,298 ಮನೆ ಸರ್ವೇ ನಡೆಸಿದೆ. 352 ಮನೆಗಳು ಬಾಕೀ ಇವೆ. ಶೇ.78.67ರಷ್ಟು ಪ್ರಗತಿಯಾಗಿದೆ. ಬೀರೂರು ಪಟ್ಟಣದಲ್ಲಿ 5,463 ಮನೆ ಸರ್ವೇ ನಡೆಯಬೇಕಿದ್ದು, 5,050 ಮನೆಗಳ ಸರ್ವೇ ಮುಗಿದಿದೆ. 413 ಮನೆ ಬಾಕೀ ಇದೆ. ಶೇ.92.44ರಷ್ಟು ಪ್ರಗತಿ ಸಾಧಿಸಿದೆ. ಶೃಂಗೇರಿ ಪಟ್ಟಣ ಪಂಚಾಯತ್ ಶೇ.100.08, ತರೀಕೆರೆ ಪುರಸಭೆ ಶೇ.106.33, ಕೊಪ್ಪ ಶೇ.106.39, ಕಡೂರು ಶೇ.107.86, ಅಜ್ಜಂಪುರ ಶೇ.123.72ರಷ್ಟು ಪ್ರಗತಿ ಸಾಧಿಸಲಾಗಿದೆ.

ಸರಕಾರ ಆದೇಶದಂತೆ ಶಾಲೆಬಿಟ್ಟ ಮಕ್ಕಳ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಗಧಿತ ಗುರಿಗಿಂತ ಶೇ.100.13ರಷ್ಟು ಸಾಧನೆ ಮಾಡಲಾಗಿದೆ. ಸರ್ವೇ ವೇಳೆ ಶಾಲೆಬಿಟ್ಟ ಮಕ್ಕಳು ಚಿಕ್ಕಮಗಳೂರು ನಗರದಲ್ಲಿ ಪತ್ತೆಯಾಗದಿರುವುದು ಸಂತೋಷದ ವಿಚಾರವಾಗಿದೆ.

- ಬಿ.ಸಿ.ಬಸವರಾಜ್, ನಗರಸಭೆ ಪೌರಾಯುಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News