ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ನಿಗೂಢ ಸಾವು!

Update: 2022-01-30 10:01 GMT
                                                                                          ವಿಜೇತ್

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಹಶೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರು ಹಕ್ಕುಪತ್ರಗಳ ವಿತರಣೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಬಲೆಗೆ ಸಿಲುಕಿ ಜೈಲು ಪಾಲಾಗಿದ್ದು, ಸದ್ಯ ಇಬ್ಬರೂ ಅಮಾನತಿನಲ್ಲಿದ್ದಾರೆ.

ಈ ಮಧ್ಯೆ ತಹಶೀಲ್ದಾರ್ ಅವರ ಕಾರು ಚಾಲಕ ಹಕ್ಕುಪತ್ರ ಹಗರಣದಲ್ಲಿ  ಬಂಧನಕ್ಕೊಳಗಾಗುವ ಭೀತಿಯಲ್ಲಿ  ಶನಿವಾರ ರಾತ್ರಿ  ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶೃಂಗೇರಿ ತಾಲೂಕಿನ ಹೆಗ್ತೂರಿ ಗ್ರಾಮ್ ವಿಜೇತ್ (26) ಆತ್ಮಹತ್ಯೆಗೆ ಶರಣಾದ ಕಾರು ಚಾಲಕನಾಗಿದ್ದಾನೆ. 

ಶೃಂಗೇರಿ  ಅಂಬುಜಾ ಹಾಗೂ ತಾಲೂಕಿನ ವಿವಿಧ ಕಂದಾಯ ಗ್ರಾಮಗಳ  ಗ್ರಾಮಲೆಕ್ಕಿಗರ ಸೇರಿಕೊಂಡು 94, 94ಸಿ ಅಡಿಯಲ್ಲಿ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲು ಸಾರ್ವಜನಿಕರಿಂದ ಲಕ್ಷ ಲಕ್ಷ ಲಂಚ ಪಡೆದು ಸುಮಾರು 600ಕ್ಕೂ ಹೆಚ್ಚು ನಕಲಿ ಹಕ್ಕುಪತ್ರಗಳನ್ನು ವಿತರಿಸಿದ್ದ ಆರೋಪಕ್ಕೆ  ಸಂಬಂಧಿಸಿ ಸ್ಥಳಿಯರೊಬ್ಬರು ಎಸಿಬಿಗೆ ದೂರು ನೀಡಿದ್ದರಿಂದ ಇತ್ತೀಚೆಗೆ ಶಂಗೇರಿ ತಹಶೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಎಂಬವರು ಲಂಚದ ಹಣದೊಂದಿಗೆ ಎಸಿಬಿ ಬಲೆಗೆ ಬಿದ್ದಿದ್ದರು. 

ಬಳಿಕ ಇಬ್ಬರೂ ಜೈಲು ಪಾಲಾಗಿದ್ದು, ಜಿಲ್ಲಾಧಿಕಾರಿ ಇಬ್ಬರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದರು.

ಈ ಪ್ರಕರಣ ಸಂಬಂಧ ಎಸಿ ಡಾ.ನಾಗರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆ ವೇಳೆ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗರು ಸೇರಿ ವಿತರಣೆ ಮಾಡಿರುವ ಎಲ್ಲ ಹಕ್ಕುಪತ್ರಗಳು ನಕಲಿ ಎಂದು ವರದಿ ನೀಡಿದ್ದರು. ಬಳಿಕ ಇದೇ ವಿಚಾರ ಸಂಬಂಧ ಕರ್ತವ್ಯ ಲೋಪದಡಿಯಲ್ಲಿ ನಾಲ್ವರು ವಿಎ ಗಳನ್ನು ಡಿಸಿ ಅಮಾನತು ಮಾಡಿದ್ದರು. ಇವರ ಮೇಲೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಹಣ ಪಡೆದು ನಕಲಿ ಹಕ್ಕುಪತ್ರ ವಿತರಣೆ ಮಾಡಿದ ಆರೋಪಿಗಳಲ್ಲಿ ತಹಶೀಲ್ದಾರ್ ಅವರ ಕಾರು ಚಾಲಕನ ಹೆಸರು ಕೇಳಿ ಬಂದಿತ್ತು. ಈ ಮಧ್ಯೆ ಶನಿವಾರ ಕಾರು ಚಾಲಕ ವಿಜೇತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ನಡುವೆ ಈ ಹಗರಣದಲ್ಲಿ ಶಾಮೀಲಾಗಿರುವ ಆರೋಪದಡಿಯಲ್ಲಿ ಶೃಂಗೆರಿ ಪೊಲೀಸರು ತಾಲೂಕು ಕಚೇರಿಯ ಶರತ್, ರಾಘವೇಂದ್ರ, ನಾಗೇಂದ್ರ ಎಂಬವರನ್ನು ಶನಿವಾರ ವಶಕ್ಕೆ ಪಡೆದದು ತನಿಖೆ ಮುಂದುವರಿದಿದೆ.

ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಸಂಬಂಧ ರವಿವಾರ ಶೃಂಗೇರಿ ಪಟ್ಟದಲ್ಲಿ ಕುಟುಂಬಸ್ಥರು, ಸಾರ್ವಜನಿಕರು ಪ್ರತಿಭಟನೆ ಮಾಡಿದ್ದು, ಕಾರು ಚಾಲಕನನ್ನು ಹಗರಣದಲ್ಲಿ ಬಲಿಪಶು ಮಾಡಲಾಗಿದ್ದು, ಆತನ ಕುಟುಂಬಕ್ಕೆ ಪರಿಹಾರ ನೀಡಬೇಕು, ಸ್ಥಳಕ್ಕೆ ಡಿಸಿ ಬರಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.

ಶೃಂಗೇರಿ ನಕಲಿ ಹಕ್ಕುಪತ್ರ ಹಗರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತಾಲೂಕು ಕಚೇರಿಗೆ ಪ್ರಭಾರಿ ತಹಶೀಲ್ದಾರ್ ನೇಮಕ ಮಾಡಿದ್ದರೂ ಹಗರಣ ಸಂಬಂಧದ ದಾಖಲೆಗಳು ಕಚೇರಿಯಿಂದ ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ತಾಲೂಕು ಕಚೇರಿಯಲ್ಲಿ ಕಾರು ಚಾಲಕನ ಮೃತ ದೇಹ ಇರಿಸಿ ಸಾರ್ವಜನಿಕರು, ಸಂಬಂದಿಕರು ಧರಣಿ ನಡೆಸಿದ್ದು, ಎಸಿ ನಾಗರಾಜ್ ಅವರನ್ನು ತರಾಟೆಗೆ ಪಡೆದಿದ್ದಾರೆ. ಕಾರು ಚಾಲಕ ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News