ಟೋಯಿಂಗ್ ವಿಚಾರದಲ್ಲಿ ಅತಿರೇಕದ ವರ್ತನೆ ಸಹಿಸಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ

Update: 2022-01-30 11:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ. 30: `ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಹಿನ್ನೆಲೆಯಲ್ಲಿ ಅತಿರೇಕದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಸಮಾಲೋಚನೆ ನಡೆಸಿ ಬದಲಾವಣೆ ತರಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಈ ಬಗ್ಗೆ ಈಗಿರುವ ವ್ಯವಸ್ಥೆಯ ಕುರಿತು ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಇಲಾಖೆಯೇ ಇದನ್ನು ಮಾಡುತ್ತಿತ್ತು, ಈಗ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಹಲವಾರು ಘಟನೆಗಳ ಬಗ್ಗೆ ಗಮನಿಸಲಾಗಿದ್ದು, ಸಾರ್ವಜನಿಕರು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಆದರೆ ಕಾನೂನಿನ ರಕ್ಷಣೆ ಮಾಡುವವರು ಸಾರ್ವಜನಿಕರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ವರ್ತಿಸಬೇಕು. ಅತಿರೇಕದ ವರ್ತನೆ ಸಹಿಸುವುದಿಲ್ಲ' ಎಂದರು.

`ಈ ಬಗ್ಗೆ ನಾಳೆ(ಜ.31) ಪೊಲೀಸ್ ಆಯುಕ್ತರು, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಟ್ರಾಫಿಕ್ ಪೆÇಲೀಸ್ ಅಧಿಕಾರಿಗಳ ಸಭೆ ಕರೆದು ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಲು ತೀರ್ಮಾನಿಸಲಾಗಿದೆ. ಹಲವಾರು ಬದಲಾವಣೆಗಳನ್ನು ತಂದು ಜನಸ್ನೇಹಿಯಾಗಿಸಲಿದ್ದೇವೆ ಎಂದು ಅವರು ತಿಳಿಸಿದರು.

ಜನೀಶ್ ಚಿಕಿತ್ಸೆಗೆ ಸಹಾಯ: ಜನೀಶ್ ಎಂಬ ಮಗುವಿಗೆ ಚಿಕಿತ್ಸೆಗಾಗಿ 16 ಕೋಟಿ ರೂ.ಅವಶ್ಯಕತೆ ಇದೆ. ಈ ರೀತಿಯ ಬಹಳಷ್ಟು ಮಕ್ಕಳಿದ್ದು, ಸರಕಾರ ಈ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದು, ಈ ಮೊತ್ತ ಏಕೆ ಬೇಕೆನ್ನುವ ಬಗ್ಗೆ ತಿಳಿದು, ಅಗತ್ಯ ಸಹಾಯ ಸಹಕಾರ ನೀಡಲಾಗುವುದು. ಸಾರ್ವಜನಿಕರೂ ಸಹಾಯ ಮಾಡಬೇಕೆಂದು ಮಾಧ್ಯಮಗಳು ಕರೆ ನೀಡಿವೆ. ಸರಕಾರವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಚಿತ್ರಮಂದಿರಗಳಲ್ಲಿ ಆಸನ ವ್ಯವಸ್ಥೆ: `ಕೋವಿಡ್ ನಿಯಮಗಳನ್ನು ಸಡಿಲಿಕೆ ಹಿನ್ನೆಲೆಯಲ್ಲಿ ಸಿನಿಮಾದವರಿಗೆ ಬಹಳಷ್ಟು  ಸವಲತ್ತುಗಳನ್ನು ನೀಡಲಾಗಿದೆ. ಅವರಿಂದ ಮನವಿ ಪಡೆದು ಆಸನ ವ್ಯವಸ್ಥೆಗಳ ಬಗ್ಗೆ ತಾಂತ್ರಿಕ ತಜ್ಞರ ಸಲಹೆ ಮೇರೆಗೆ  ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News