×
Ad

ಏಪ್ರಿಲ್ ನಲ್ಲಿ ಜಿ.ಪಂ, ತಾ.ಪಂ ಚುನಾವಣೆ ಮಾಡಿ ಮುಗಿಸಲಿದ್ದೇವೆ: ಸಚಿವ ಈಶ್ವರಪ್ಪ

Update: 2022-01-30 21:41 IST
ಸಚಿವ ಈಶ್ವರಪ್ಪ

ಶಿವಮೊಗ್ಗ, ಜ.30:  ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಮಾಡಿ ಮುಗಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಿ.ಪಂ ಹಾಗೂ ತಾ.ಪಂ ಚುನಾವಣೆ ಬಗ್ಗೆ ಸರ್ಕಾರ ಕ್ರಮಕೈಗೊಂಡಿದೆ‌. ಈ ಹಿಂದೆಯೇ ಚುನಾವಣೆ ನಡೆಸಲು ತೀರ್ಮಾನಿಸಿದ್ದೆವು. ಆದರೆ, ಮೀಸಲಾತಿ ಸರಿಯಿಲ್ಲ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಸರಿಯಿಲ್ಲ ಎಂದು 780 ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಹೀಗಾಗಿ, ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಕ್ಷೇತ್ರ ಪುನರ್ವಿಂಗಡಣಾ ಸಮಿತಿ ರಚನೆ ಮಾಡಲಾಗಿತ್ತು. ಇನ್ನೇನು ಲಕ್ಷ್ಮಿನಾರಾಯಣ್ ಅವರು ವರದಿ ನೀಡಲಿದ್ದಾರೆ. ವರದಿ ಬಂದ ತಕ್ಷಣ ಚುನಾವಣೆ ನಡೆಸುತ್ತೇವೆ ಎಂದರು.

ಮಾರ್ಚ್ ಅಂತ್ಯ ಅಥವಾ ಏಪ್ರಿಲ್​​ನಲ್ಲಿ ಚುನಾವಣೆ ಮಾಡಿ ಮುಗಿಸಲಿದ್ದೇವೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ರಾಜ್ಯದಲ್ಲಿ ಹೆಚ್ಚಿನ ಕೆಲಸಗಳು ಆಗಿವೆ. ಜಲಾಮೃತ ಯೋಜನೆ ಅನುಷ್ಟಾನದಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ.ಮನೆ ಮನೆಗೆ ಗಂಗೆ ಯೋಜನೆಯಡಿ ಸಾಕಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ‌ ನೀಡಿದ್ದೇವೆ. ಈ ಯೋಜನೆ ಅನುಷ್ಠಾನದಲ್ಲಿ‌ ಕರ್ನಾಟಕ ದೇಶದಲ್ಲಿ 14ನೇ ಸ್ಥಾನದಲ್ಲಿದೆ ಎಂದರು. ಪಿಎಂಜಿಎಸ್​​​ವೈ ಯೋಜನೆಯಡಿ ಕರ್ನಾಟಕಕ್ಕೆ ಐದು ಸಾವಿರ ಕಿಲೋಮೀಟರ್ ರಸ್ತೆ ಮಂಜೂರಾಗಿತ್ತು.

ಈ ಯೋಜನೆಯಡಿ ರಾಜ್ಯದ ಗ್ರಾಮೀಣ ಭಾಗದ ಸಾಕಷ್ಟು ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಚಿವ ಸುನೀಲ್ ಕುಮಾರ್​ಗೆ ಮಾಹಿತಿ ನೀಡಿದ್ದೆ. ಇದೀಗ ಸುನೀಲ್ ಕುಮಾರ್ ಈ ಯೋಜನೆ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News