×
Ad

ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಡಿ.ಕೆ ಶಿವಕುಮಾರ್- ಸಚಿವ ಆನಂದ್ ಸಿಂಗ್ ಭೇಟಿ

Update: 2022-01-31 17:32 IST

ಬೆಂಗಳೂರು, ಜ. 31: ಬಿಜೆಪಿಯ ಸಚಿವರು, ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರ ಇಲ್ಲಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಸಚಿವ ಆನಂದ್ ಸಿಂಗ್ ಸುಮಾರು ಹೊತ್ತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಆನಂದ್ ಸಿಂಗ್, ಶಿವಕುಮಾರ್ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಸರಕಾರಿ ಕಾರು ಬಳಸದೆ ಖಾಸಗಿ ಕಾರಿನಲ್ಲಿ ಬಂದಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ವಿಸ್ತರಿಸಿದ ಸಂದರ್ಭದಲ್ಲಿ ತಮಗೆ ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಆನಂದ್‍ಸಿಂಗ್ ಬೇರೆ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದರು. ಬೇರೆ ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆಪ್ತರಲ್ಲಿ ಹೇಳಿದ್ದರು. ನಂತರ ಮುಖ್ಯಮಂತ್ರಿಗಳು ಅವರ ಅಸಮಾಧಾನವನ್ನು ಶಮನ ಮಾಡಿ ಎಲ್ಲವನ್ನು ಸರಿಪಡಿಸಿದ್ದರು.

ಈ ಮಧ್ಯೆ ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಸಂದರ್ಭದಲ್ಲಿ ಆನಂದ್‍ಸಿಂಗ್ ಅವರಿಗೆ ವಿಜಯನಗರ ಜಿಲ್ಲೆಯ ಉಸ್ತುವಾರಿ ನೀಡದೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಇದರಿಂದಲೂ ಆನಂದ್‍ಸಿಂಗ್ ಅಸಮಾಧಾನಗೊಂಡಿದ್ದರು. ಈ ಬೆಳವಣಿಗೆಗಳ ನಡುವೆಯೇ ಆನಂದ್‍ಸಿಂಗ್ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ಕುತೂಹಲ ಸೃಷ್ಟಿಸಿದೆ.

ಆನಂದ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆನಂದ್ ಸಿಂಗ್ ಅವರು ಯಾವುದೇ ರಾಜಕೀಯ ಮಾತನಾಡಲು ನಮ್ಮ ಮನೆಗೆ ಬರುವ ಅಗತ್ಯ ಇರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ ಎಂದು ನಾನೇ ಹೇಳಿದ್ದೆ. ಹೀಗಾಗಿ ನಮ್ಮ ಮನೆಗೆ ಬಂದಿದ್ದರು ಅಷ್ಟೇ. ಇದಕ್ಕೆಲ್ಲ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News