ಹಾವೇರಿಯ ನೆಲವಾಗಿಲು ಗ್ರಾಮ ಸ್ಥಳಾಂತರ: ಹೈಕೋರ್ಟ್ ಗೆ ವಸ್ತುಸ್ಥಿತಿ ವರದಿ ಸಲ್ಲಿಕೆ
ಬೆಂಗಳೂರು, ಜ.31: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನೆಲವಾಗಿಲು ಗ್ರಾಮವನ್ನು ಅದೇ ಜಿಲ್ಲೆಯ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಫಲಾನುಭವಿಗಳೇ ಅಡ್ಡಿಪಡಿಸುತ್ತಿದ್ದಾರೆ ಎಂದು ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ನೆಲವಾಗಿಲು ಗ್ರಾಮದಲ್ಲಿ ನೀರು ಮತ್ತು ಗಾಳಿ ಮಾಲಿನ್ಯವಾಗಿರುವ ಹಿನ್ನೆಲೆ ಅಲ್ಲಿನ ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸಲು ಸರಕಾರಕ್ಕೆ ಆದೇಶಿಸಬೇಕು ಎಂದು ರೇಣುಕಾ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಹೈಕೋರ್ಟ್‍ನ ಹಿಂದಿನ ನಿರ್ದೇಶನದಂತೆ ನೆಲವಾಗಿಲು ಗ್ರಾಮದ ನಿವಾಸಿಗಳನ್ನು ಸ್ಥಳಾಂತರ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ.ಶಿವಕುಮಾರ್ ಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದರು.
ನೆಲವಾಗಿಲು ಗ್ರಾಮದ ನಿವಾಸಿಗಳನ್ನು ಸ್ಥಳಾಂತರಿಸಲು ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ 34.14 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 478 ನಿವೇಶನ ರಚಿಸಿದ್ದು, 452 ನಿವೇಶನ ಹಂಚಿಕೆ ಮಾಡಲಾಗಿದೆ. ಅದರಲ್ಲಿ 18 ಜನ ನಿವೇಶನ ತಿರಸ್ಕರಿಸಿದ್ದಾರೆ. ಉಳಿದ 434 ನಿವೇಶನಗಳಲ್ಲಿ 52 ಫಲಾನುಭವಿಗಳೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಸದ್ಯ ನಾಲ್ಕು ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಸರಕಾರವು 56 ಮನೆಗಳ ನಿರ್ಮಾಣ ಮಾಡಿದ್ದು, ಅದರಲ್ಲಿ 19 ಫಲಾನುಭವಿಗಳು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ.
ಉಳಿದಂತೆ 378 ಫಲಾನುಭವಿಗಳು ಸ್ಥಳಾಂತರಕ್ಕೆ ವಿವಿಧ ಷರತ್ತು ಹಾಗೂ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವವರೆಗೂ ಸ್ಥಳಾಂತರಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ.
ಜತೆಗೆ, ಪ್ರತಿಭಟನೆ ನಡೆಸುತ್ತಾ ಮನೆಗಳ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದ್ದಾರೆ. ಅನೇಕ ಬಾರಿ ಸಂಧಾನ ನಡೆಸಿದ್ದರೂ, ಫಲಾನುಭವಿಗಳು ಒಪ್ಪುತ್ತಿಲ್ಲ. ಇದರಿಂದ ಸ್ಥಳಾಂತರ ಕಾರ್ಯ ಸ್ಥಗಿತಗೊಂಡಿದೆ. ಸರಕಾರವೂ ಮನೆಗಳ ನಿರ್ಮಾಣಕ್ಕೆ ಸಿದ್ಧವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಸರಕಾರದ ವಸ್ತುಸ್ಥಿತಿ ವರದಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಅರ್ಜಿದಾರರು ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.