ಕಾಂಗ್ರೆಸ್-ಬಿಜೆಪಿ ಪಕ್ಷ ಬಿಡುವವರ ಪಟ್ಟಿ ನನ್ನ ಬಳಿ ಇದೆ ಎಂದ ಶಾಸಕ ಯತ್ನಾಳ್
ಬೆಂಗಳೂರು, ಜ. 31: ‘ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಬಿಡುವವರ ಪಟ್ಟಿ ನನ್ನ ಬಳಿ ಇದೆ. ಕಾಂಗ್ರೆಸ್‍ನಿಂದ ಯಾರ್ಯಾರು ಬಿಡಲಿದ್ದಾರೆಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಎಲ್ಲವನ್ನು ಕಾಲ-ಕಾಲಕ್ಕೆ ಹೇಳುತ್ತೇನೆ. ಇನ್ನು ಆರು ತಿಂಗಳು ತಡೆಯಿರಿ, ಹೇಗೆ ಜಾದೂ ನಡೆಯುತ್ತದೆ ಎಂದು ನೀವೇ ನೋಡಿ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸೋಮವಾರ ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆಗೆ ಆರು ತಿಂಗಳು ಇರುವಾಗ ಸಚಿವ ಸಂಪುಟ ಪುನಾರಚನೆ ಮಾಡಿದರೆ ನಾವ್ಯಾರು ಮಂತ್ರಿ ಆಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆ ಇದೆ. ಹೀಗಾಗಿ ನಾಳೆ ಮುಖ್ಯಮಂತ್ರಿಗಳು ಹೊಸದಿಲ್ಲಿಗೆ ಹೊರಟಿದ್ದಾರೆ. ಅಲ್ಲಿ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಮಾಡಬಹುದು. ಯಾವಾಗ ಆಗುತ್ತೋ ಆಗಲಿ, ಚುನಾವಣೆಗೆ ಆರು ತಿಂಗಳ ಇರುವಾಗ ಸಚಿವ ಸ್ಥಾನ ನೀಡಿದರೆ ನಾವು ಮಂತ್ರಿ ಆಗುವುದಿಲ್ಲ ಎಂದು ಸ್ಪ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಮುಗಿಸುವುದು ಡಿ.ಕೆ.ಶಿವಕುಮಾರ್ ಪಾದಯಾತ್ರೆ ಉದ್ದೇಶವಾಗಿದೆ. ಜನರಿಗಾಗಿ ಪಾದಯಾತ್ರೆ ಮಾಡುವುದಿಲ್ಲ. ಕಾಂಗ್ರೆಸ್ 50 ವರ್ಷಗಳ ಕಾಲ ದೇಶವನ್ನು ಆಳಿದೆ. ಆಗ ಏಕೆ ಮೇಕೆದಾಟು, ಆಲಮಟ್ಟಿ, ಕಾವೇರಿ ಜಗಳ ಬಗೆಹರಿಸಲಿಲ್ಲ. ಅಧಿಕಾರದಲ್ಲಿದ್ದಾಗ ಎಲ್ಲ ಲೂಟಿ ಮಾಡಿ ಈಗ ಅಧಿಕಾರದ ಆಸೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ದೇಶದಲ್ಲಿ 50 ವರ್ಷದಲ್ಲಿ ಕಾಂಗ್ರೆಸ್ಸಿಗರು ಲೂಟಿ ಮಾಡಿರುವ ಹಣವನ್ನು ಸರಕಾರಕ್ಕೆ ನೀಡಿದರೆ ಎಲ್ಲ ನೀರಾವರಿ ಯೋಜನೆ ಮುಗಿಯುತ್ತವೆ. ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಜನರನ್ನು ಮರಳು ಮಾಡಲು ಪಾದಯಾತ್ರೆಗೆ ಮುಂದಾಗಿದ್ದು, ಕಾಂಗ್ರೆಸ್ ಯಶಸ್ವಿ ಆಗಲು ಸಾಧ್ಯವಿಲ್ಲ ಎಂದು ನುಡಿದರು.
ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕ ರೇಣುಕಾಚಾರ್ಯ ಸಿಎಂ ಹಾಗೂ ವರಿಷ್ಠರಿಗೆ ದೂರು ನೀಡುವ ವಿಚಾರ ಅದು ಅವರ ವೈಯಕ್ತಿಕ. ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಿವರಣೆ ನೀಡಿದ ಅವರು, ನಾನು ಯಾವ ಸಚಿವರ ವಿರುದ್ಧವು ದೂರು ಕೊಡುವುದಿಲ್ಲ. ನನ್ನ ಜೊತೆಗೆ ಎಲ್ಲ ಸಚಿವರು ಚೆನ್ನಾಗಿದ್ದಾರೆ. ಸಚಿವರು ಸಹಕಾರ ನೀಡಿದ್ದಾರೆ. ಹೋದಾಗ ಗೌರವ ಕೊಟ್ಟಿದ್ದಾರೆ. ನಾ ಹೇಳಿದಾಗ ಆದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಸಚಿವರ ಬಗ್ಗೆಯೂ ನನ್ನ ಆರೋಪ, ದೂರು ಇಲ್ಲ ಎಂದು ಹೇಳಿದರು.