ಮಡಿಕೇರಿ: ಮನೆಯ ಬಾಗಿಲು ಬಡಿದು ಆತಂಕ ಸೃಷ್ಟಿಸಿದ್ದ ಆರೋಪಿ ಪೊಲೀಸ್ ವಶ
ಮಡಿಕೇರಿ ಜ.31 : ದಕ್ಷಿಣ ಕೊಡಗಿನ ಕೈಕೇರಿ ಗ್ರಾಮದಲ್ಲಿ ಮನೆಯೊಂದರ ಕಾಂಪೌಂಡ್ ಹಾರಿ ಬಂದು ಬಾಗಿಲನ್ನು ಜೋರಾಗಿ ಬಡಿದು ಆತಂಕ ಸೃಷ್ಟಿಸಿದ್ದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಗ್ರಾಮದ ವಿನೋದ್ ಎಂಬುವವರ ಮನೆಯ ಗೇಟ್ ಬಳಿ ಆಗಮಿಸಿದ ಅಪರಿಚಿತ ವ್ಯಕ್ತಿ ಗೇಟ್‍ಗೆ ಬೀಗ ಹಾಕಿರುವುದನ್ನು ಗಮನಿಸಿ ಕಾಂಪೌಂಡ್ ಹಾರಿದ್ದಾನೆ. ಮನೆಯೊಡತಿ ಯಾರು ಎಂದು ಆತಂಕದಿಂದ ಪ್ರಶ್ನಿಸಿದಾಗ ಮನೆ ಕೆಲಸ ಮಾಡುವುದಾಗಿ ಹೇಳಿ ಬಾಗಿಲನ್ನು ಜೋರಾಗಿ ಬಡಿದಿದ್ದಾನೆ.
ಮನೆಯಲ್ಲಿ ಯಾವುದೇ ಕೆಲಸವಿಲ್ಲ ಇಲ್ಲಿಂದ ಹೊರಡು, ಇಲ್ಲದಿದ್ದರೆ ಪೊಲೀಸರಿಗೆ ತಿಳಿಸುವುದಾಗಿ ಹೇಳಿದರೂ ಆ ವ್ಯಕ್ತಿ ಭಯ ಪಡದೆ ಮನೆಯ ಬಾಗಿಲನ್ನು ನಿರಂತರವಾಗಿ ಬಡಿಯಲಾರಂಭಿಸಿದ್ದಾನೆ.
ಇದರಿಂದ ಆತಂಕಗೊಂಡ ಮಹಿಳೆ ತನ್ನ ಸಮಯ ಪ್ರಜ್ಞೆ ತೋರಿ, ಮನೆಯ ಬಾಗಿಲನ್ನು ಭದ್ರಪಡಿಸಿ, ಮನೆಯ ಪಕ್ಕದಲ್ಲಿದ್ದವರನ್ನು ಜೋರಾಗಿ ಕರೆದಿದ್ದಾರೆ. ಅಲ್ಲದೆ ಸಮೀಪದ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದರು. ಆರೋಪಿಯನ್ನು ಬೆಂಗಳೂರು ಮೂಲದ ಅರುಣ್ ಎಂದು ಗುರುತಿಸಲಾಗಿದೆ. ಈತ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.