×
Ad

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಅಂಧ ವ್ಯಕ್ತಿ!

Update: 2022-01-31 22:29 IST

ಶಿವಮೊಗ್ಗ, ಜ.31: ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಅಂಧ ವ್ಯಕ್ತಿಯೊಬ್ಬ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಇಮಾಮ್ ಸಾಬ್ ಇನಾಂದಾರ್(38) ಎಂಬ ಅಂಧರೊಬ್ಬರು ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡವರು.ಈ ಘಟನೆಗೆ ಗುತ್ತಿಗೆದಾರರ  ಕಾಮಗಾರಿ ವಿಳಂಬವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಘಟನೆ ಹಿನ್ನಲೆ: ಇಮಾಮ್ ಸಾಬ್ ಇನಾಂದಾರ್ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನವರು.ಹುಟ್ಟಿನಿಂದ ಅಂಧತ್ವ ಇದೆ.ಕಳೆದ 5 ವರ್ಷಗಳಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ 2ನೇ ಡಿವಿಜನ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ.ಐದು ವರ್ಷದಿಂದ ಕುವೆಂಪು ರಂಗಮಂದಿರ ಮುಂಭಾಗದ ರಸ್ತೆಯ ಮೂಲಕ ನ್ಯಾಯಾಲಯಕ್ಕೆ ತೆರಳುತ್ತಿದ್ದರು.

ಗುರುವಾರ ಮಧ್ಯಾಹ್ನ  ಇಮಾಮ್ ಸಾಬ್ ಇನಾಂದಾರ್ ಎಂದಿನಂತೆ  ಊಟಕ್ಕೆಂದು ಶಿವಮೊಗ್ಗ ನ್ಯಾಯಾಲಯದಿಂದ ಹಾಸ್ಟೆಲ್‌ಗೆ ತೆರಳುತ್ತಿದ್ದರು. ಆದರೆ ಆ ರಸ್ತೆಯಲ್ಲಿ ಹೊಸತೊಂದು ಗುಂಡಿ ತೆಗೆದಿರುವುದು ಇಮಾಮ್ ಸಾಬ್ ಇನಾಂದಾರ್ ಗಮನಕ್ಕೆ ಬಂದಿರಲಿಲ್ಲ.

ತಪ್ಪಿತ್ತು ಭಾರಿ ಅನಾಹುತ: ಇಮಾಮ್ ಸಾಬ್ ಇನಾಂದಾರ್ ಅವರು ಬಿದ್ದ ಗುಂಡಿಯೊಳಗೆ ಕಬ್ಬಿಣದ ರಾಡ್‌ಗಳನ್ನು ಹಾಕಿರಲಿಲ್ಲ. ಒಂದು ವೇಳೆ ರಾಡ್‌ಗಳನ್ನು ಹಾಕಿದ್ದರೆ ದೊಡ್ಡ ಅನಾಹುತಸಂಭವಿಸುತ್ತಿತ್ತು. ಸದ್ಯ ಇಮಾಮ್ ಸಾಬ್ ಇನಾಂದಾರ್‌ಅವರ ಬಲಗಾಲಿಗೆ ಫ್ಯಾಕ್ಟರ್ ಆಗಿದೆ. ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಗುತ್ತಿಗೆದಾರನ ವಿರುದ್ಧ ಕೇಸ್: ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಸುರಕ್ಷತಾ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಅವರ ವಿರುದ್ದ ಇಮಾಮ್ ಸಾಬ್ ಇನಾಂದಾರ್ ಅವರು ದೂರು ದಾಖಲಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News