×
Ad

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಹೈಕೋರ್ಟ್‍ಗೆ ಮಧ್ಯಂತರ ವರದಿ ಸಲ್ಲಿಸಿದ ಎಸ್‍ಐಟಿ

Update: 2022-01-31 22:42 IST

ಬೆಂಗಳೂರು, ಜ.31: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಹೈಕೋರ್ಟ್‍ಗೆ ಮಧ್ಯಂತರ ವರದಿ ಸಲ್ಲಿಸಿದೆ.   

ಸಂತ್ರಸ್ತೆ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ವಿಶೇಷ ತನಿಖಾ ತಂಡ(ಎಸ್‍ಐಟಿ) ತನಿಖೆ ನಡೆಸಿದ್ದು, ದೂರು ಸಲ್ಲಿಸುವಾಗ ಆಕೆ ನೀಡಿದ ಹೇಳಿಕೆಗೂ ಹಾಗೂ ತನಿಖೆ ನಡೆಸುವಾಗ ನೀಡಿರುವ ಹೇಳಿಕೆಗಳು ವಿಭಿನ್ನವಾಗಿವೆ ಎಂದು ತಿಳಿದು ಬಂದಿದೆ. 

ಈಗಾಗಲೇ ಪ್ರಕರಣ ಸಂಬಂಧ ಹಲವು ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಪ್ರಕರಣದಲ್ಲಿ ಓರ್ವ ಮಾಜಿ ಶಾಸಕನನ್ನು ಸಾಕ್ಷಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಂತ್ರಸ್ತೆಯ ಹಿನ್ನೆಲೆ ಕೆದಕಿದ ಎಸ್‍ಐಟಿ ತಂಡ ದೂರು ನೀಡುವಾಗ ಸಂತ್ರಸ್ತೆ ಖಾಸಗಿ ಕಂಪೆನಿಯೊಂದರಲ್ಲಿ ಟೆಲಿಕಾಲರ್ ಎಂದು ಹೇಳಿದ್ದಳು. ತನಿಖೆ ಸಂದರ್ಭದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. 

ಮತ್ತೊಂದೆಡೆ ಇಂಜಿನಿಯರಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದ ಸಂತ್ರಸ್ತೆ ವಿಚಾರಣೆ ನಡೆಸಿದಾಗ ಇಂಜಿನಿಯರಿಂಗ್ ಪೂರ್ಣವಾಗದೆ, ಈವರೆಗೆ ಸುಮಾರು 22 ವಿಷಯಗಳಲ್ಲಿ ನಪಾಸು  ಆಗಿದ್ದಾಳೆ ಎಂಬುದು ತಿಳಿದು ಬಂದಿದೆ. ಅತ್ಯಾಚಾರ ಆರೋಪ ಸಂಬಂಧ ಎಸ್‍ಐಟಿ ಸಂತ್ರಸ್ತೆಯನ್ನ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ವೈದ್ಯರು ನೀಡಿದ ವರದಿಯನ್ನು ಸಹ ಮಧ್ಯಂತರ ವರದಿಯ ಜೊತೆ ಸಲ್ಲಿಕೆ ಮಾಡಲಾಗಿದೆ. ವೈದ್ಯರು ನೀಡಿದ ವರದಿಯಲ್ಲಿ ಅತ್ಯಾಚಾರ ಮಾಡಿರುವ ಯಾವ ಕುರುಹುಗಳಿಲ್ಲ.

ದೈಹಿಕವಾಗಿಯೂ ಯಾವುದೇ ಕುರುಹುಗಳು ಕಾಣಿಸಿಲ್ಲ. ಇದೇ ವರದಿಯನ್ನ ಆಧಾರವಾಗಿಟ್ಟುಕೊಂಡು ಮತ್ತಷ್ಟು ವಿಚಾರಣೆ ನಡೆಸಿದ ಅಧಿಕಾರಿಗಳು ಈ ಹಿಂದೆ ವ್ಯಕ್ತಿ ಓರ್ವನ ಜತೆ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಪರಿಚಿತನನ್ನ ಕರೆಯಿಸಿ ವಿಚಾರಣೆ ನಡೆಸಿ ಎಸ್‍ಐಟಿ ಹೇಳಿಕೆ ದಾಖಲಿಸಿದೆ.

ಎಸ್‍ಐಟಿಗೆ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಒದಗಿ ಬಂದಿದೆ. ಹನಿಟ್ರ್ಯಾಪ್ ಮಾಡಲು ಪೂರ್ವನಿಯೋಜಿತವಾಗಿ ಪ್ಲ್ಯಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಹ್ಯಾಕರ್ ಸ್ನೇಹಿತೆಯನ್ನ ವಿಚಾರಣೆ ನಡೆಸಿರುವ ಎಸ್‍ಐಟಿ, ಆಕೆಗೆ ಹ್ಯಾಕರ್ ಒಂದು ದೊಡ್ಡ ಅಪರೇಷನ್ ಮಾಡುತ್ತಿದ್ದೇನೆ. ಹೀಗಾಗಿ, ನ್ಯೂಡ್ ಫೋಟೋಸ್ ಕಳಿಸುವಂತೆ ಕೇಳಿದ್ದನಂತೆ. ಹ್ಯಾಕರ್ ಗೆ ಗೆಳತಿ ಬೆಂಬಲಿಸದೆ ಇರುವುದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ. 

ಟ್ರ್ಯಾಪ್ ಮಾಡಲೆಂದೇ ಎಸ್ಪಿ ರೋಡಿನಲ್ಲಿ ಕ್ಯಾಮೆರಾ ಸಹ ಖರೀದಿ ಮಾಡಿದ್ದರು. ಲಾಕ್‍ಡೌನ್ ಇದ್ದ ಹಿನ್ನೆಲೆ ಕರೆ ಮಾಡಿ ಕ್ಯಾಮೆರಾ ಬೇಕೆಂದು ಕೇಳಿದ್ದರಿಂದ ಮೈಸೂರು ಬ್ಯಾಂಕ್ ಬಳಿ ಬಂದು ಅಂಗಡಿ ಮಾಲಕ ನೀಡಿದ್ದಾನೆ. ಆನ್‍ಲೈನ್ ಮೂಲಕ ಕ್ಯಾಮೆರಾಗೆ ಪೇಮೆಂಟ್ ಸಹ ಮಾಡಲಾಗಿದೆ. ಪೇಮೆಂಟ್ ಮಾಡಿದ್ದಕ್ಕೆ ಎಸ್‍ಐಟಿ ದಾಖಲಾತಿಗಳನ್ನ ಕಲೆ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News