ಚಿಕ್ಕಮಗಳೂರು: ದಬೆದಬೆ ಫಾಲ್ಸ್ ಉಸ್ತುವಾರಿ, ನಿರ್ವಹಣೆಯನ್ನು ಗ್ರಾ.ಪಂ ಸಮಿತಿಗೆ ನೀಡಲು ಆಗ್ರಹಿಸಿ ಮನವಿ
ಚಿಕ್ಕಮಗಳೂರು, ಜ.31: ಅತ್ತಿಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ದಬೆದಬೆ ಫಾಲ್ಸ್‍ನ ಮೇಲುಸ್ತುವಾರಿಯನ್ನು ಗ್ರಾಮ ಪಂಚಾಯತ್ ರಚಿಸಿದ ಸಮಿತಿಗೆ ನೀಡಬೇಕೆಂದು ಒತ್ತಾಯಿಸಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮುಖಂಡರು, ಇನಾಂ ದತ್ತಾತ್ರೇಯ ಪೀಠದ ಗ್ರಾಮಸ್ಥರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ದಬೆ ದಬೆ ಫಾಲ್ಸ್ ಮೇಲುಸ್ತುವಾರಿ ಮತ್ತು ನಿರ್ವಹಣೆಯನ್ನು ಅತ್ತಿಗುಂಡಿ ಗ್ರಾಮ ಪಂಚಾಯತ್‍ಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಫಾಲ್ಸ್‍ಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‍ಗಳ ಉಸ್ತುವಾರಿಗೆ ಸಮಿತಿ ರಚಿಸಿ ಅದರಿಂದ ಬರುವ ಆದಾಯವನ್ನು ಪಂಚಾಯತ್ ಅಭಿವೃದ್ಧಿಗೆ ಬಳಸುವಂತೆ ಗ್ರಾಮಸ್ಥರು ತಿಳಿಸಿದ್ದು, ಅದರಂತೆ ಗ್ರಾಮ ಪಂಚಾಯತ್ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದರು.
ಈ ಸಂಬಂಧ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಸರಕಾರಿ ರಸ್ತೆ ಮತ್ತು ನೈಸರ್ಗಿಕ ಝರಿಯ ಮೇಲುಸ್ತುವಾರಿ ಮತ್ತು ನಿರ್ವಹಣೆಗೆ ಸಮಿತಿಯ ಆವಶ್ಯಕತೆ ಇದೆ. ಸಮಿತಿ ರಚಿಸಲು ಗ್ರಾಮ ಪಂಚಾಯತ್‍ಗೆ ಅಧಿಕಾರವಿದ್ದು, ಅದರಂತೆ ಇನಾಂ ದತ್ತಾತ್ರೇಯ ಪೀಠ ದಬೆ ದಬೆ ಫಾಲ್ಸ್ ಮೇಲುಸ್ತುವಾರಿ ಮತ್ತು ನಿರ್ವಹಣಾ ಸಮಿತಿ ಹೆಸರಿನಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ಫಾಲ್ಸ್ ಗೆ ಹೋಗುವ ಪ್ರತೀ ಜೀಪ್ ಮಾಲಕರು ಪ್ರವಾಸಿಗರಿಂದ 3,400 ರೂ. ಬಾಡಿಗೆ ವಸೂಲಿ ಮಾಡುತ್ತಿದ್ದು, ಕೆಲವರು ಪಂಚಾಯತ್ ರಚಿಸಿದ ಸಮಿತಿಯನ್ನು ಖಾಸಗಿ ವ್ಯಕ್ತಿಗಳು ಒಪ್ಪುತ್ತಿಲ್ಲ, ರಸ್ತೆ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಗ್ರಾಮ ಪಂಚಾಯತ್‍ನಿಂದ ನಿರ್ವಹಿಸಲಾಗುತ್ತಿದೆ. ಈ ಕಾರ್ಯಕ್ಕೆ ಹಣದ ಆವಶ್ಯಕತೆ ಇರುವುದರಿಂದ ಫಾಲ್ಸ್ ನಿರ್ವಹಣೆ ಮತ್ತು ಉಸ್ತುವಾರಿಯನ್ನು ಸಮಿತಿಗೆ ನೀಡಬೇಕು. ಇದಕ್ಕೆ ಆಕ್ಷೇಪಣೆ ಬಂದಲ್ಲಿ ಜಿಲ್ಲಾಡಳಿತ ಮಾನ್ಯ ಮಾಡಬಾರದು ಎಂದ ಮನವಿ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.