ಮೈಸೂರು: ಖಾಸಗಿ ಕಂಪನಿಯವರಿಗೆ ಅನುಕೂಲ ಮಾಡಿಕೊಡಲು ಗ್ಯಾಸ್ ಪೈಪ್ ಲೈನ್ ಅಳವಡಿಕೆ; ಎಂ.ಲಕ್ಷ್ಮಣ್ ಆರೋಪ

Update: 2022-01-31 17:53 GMT

ಮೈಸೂರು,ಜ.31: ಮೈಸೂರು ನಗರದಲ್ಲಿ ಗ್ಯಾಸ್ ಪೈಪ್ ಲೈನ ಅಳವಡಿಕೆ ವಿಚಾರದಲ್ಲಿ ಗೊಂದಲಗಳಿವೆ. ಕೇಂದ್ರ ಸರ್ಕಾರ ಖಾಸಗಿಯ 17 ಕಂಪನಿಗೆ ಟೆಂಡರ್ ಕೊಟ್ಟಿದೆ. ಇದು ಖಾಸಗೀಕರಣ ಮಾಡುವ ಹುನ್ನಾರ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಬಿಜೆಪಿ ಇದನ್ನು ಸ್ಥಗಿತ ಗೊಳಿಸಿದೆ. ಗ್ಯಾಸ್ ಬೆಲೆ 340 ಇದ್ದಿದ್ದು ಈಗ 1000 ರೂ ಆಗಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಬ್ಸಿಡಿ ಕೊಡಲು ಆಗಬಾರದು ಎಂಬುದೇ ಬಿಜೆಪಿಯವರ ಅಜೆಂಡಾ ಎಂದು ಕಿಡಿಕಾರಿದರು.

ಈಗ ಪೈಪ್ ಲೈನ್ ಮೂಲಕ 500 ರೂ ಗ್ಯಾಸ್ ನೀಡುತ್ತೇವೆ ಎಂಬುದು ಶುದ್ಧ ಸುಳ್ಳು. ಪ್ರತಿ ಮನೆಗೆ ಪ್ರಾರಂಭದಲ್ಲಿ 7154 ರೂ. ಕಟ್ಟಬೇಕು. ಇದನ್ನು ಪ್ರತಾಪ್ ಸಿಂಹ ಮರೆಮಾಚಿದ್ದಾರೆ. ಜತೆಗೆ ಗ್ಯಾಸ್ ಬಿಲ್ ಕಟ್ಟದಿದ್ದರೆ ತಾತ್ಕಾಲಿಕ ತಡೆಗೆ ಹಣ ಕಟ್ಟಬೇಕು. ಮತ್ತೆ ಕನೆಕ್ಷನ್ ಬೇಕಿದ್ದರೆ ಆದಕ್ಕೂ ಹಣ ಕಟ್ಟಬೇಕು. ತಿಂಗಳ ಮಿನಿಮಮ್ ಬಿಲ್ ಕೊಡಲು 50 ರೂ. ಚಾರ್ಜ್ ಮಾಡಲಾಗುತ್ತೆ. ಒತ್ತಡದಿಂದ ಕನೆಕ್ಷನ್ ಕಟ್ ಮಾಡಿದರೆ ಅದಕ್ಕೂ ಹಣ ಕಟ್ಟಬೇಕು. ಹೀಗೆ ಇನ್ನೂ ಅನೇಕ ರೀತಿಯಲ್ಲಿ ಹಣ ಸುಲಿಗೆ ಮಾಡಲಾಗುವುದು. ಪ್ರತಾಪ್ ಸಿಂಹ ಇದನ್ನುನ ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ, ಇದು ಮೋದಿಯವರ ಕನಸಿನ ಪ್ರಾಜೆಕ್ಟ್ ಅಂತೀರಿ, ಇದು ಮೋದಿ ಕನಸಿನ ಪ್ರಾಜೆಕ್ಟ್ ಅಲ್ಲ. ಖಾಸಗಿಯವರ ಕಮಿಷನ್ ಪೆಟ್ ಪ್ರಾಜೆಕ್ಟ್. ಬರೀ ಸುಳ್ಳು ಹೇಳಬೇಡಿ ಎಂದರು.

ಹಿಂದೆ ಕೋವಿಡ್ ಕೇರ್ ಸೆಂಟರ್ ಖಾಸಗೀಯವರಿಗೆ ನೀಡಿ ಹಣ ಮಾಡಿದ್ರಿ. ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರೇ ಹೇಳಿದ್ದರು. ಈಗ ಗ್ಯಾಸ್ ವಿಚಾರದಲ್ಲಿ ಖಾಸಗಿ ಬಗ್ಗೆ ಒಲವು ಯಾಕೆ.? ಖಾಸಗಿಯವರು ಬಡ ಬಗ್ಗರನ್ನು ಸುಲಿಗೆ ಮಾಡಿಬಿಡುತ್ತಾರೆ. ನಿಮ್ಮ ಪಕ್ಷದ ಪಾಲಿಕೆ ಸದಸ್ಯರು ಮೀಟಿಂಗ್ ಗೆ ಬರಲಿಲ್ಲ. ಹಾಗಿದ್ದರೆ ಇದರಲ್ಲಿ ಏನೊ ವಿಚಾರ ಇರಬೇಕು ಅಲ್ವಾ. ನಿಮ್ಮ ಪಕ್ಷದ ಶಾಸಕರು ಕಮಿಷನ್ ದುಡ್ಡು ಕೇಳುತ್ತಿದ್ದಾರೆ ಎಂಬ ರೀತಿ ನೀವೇ ಮಾತನಾಡಿದ್ದೀರಿ. ಕಮಿಷನ್ ವಿಚಾರ ಅಲ್ಲ ಅಂತ ಶಾಸಕ ನಾಗೇಂದ್ರ ಚಾಮುಂಡೇಶ್ವರಿ ಮೇಲೆ ಆಣೆ ಮಾಡ್ತಾರೆ. ಏನು ಇದರ ಅರ್ಥ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಸೇಪ್ಟಿ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಮೈಸೂರು ಕೊಡಗಿಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಶೂನ್ಯ. ಕಾಂಗ್ರೆಸ್ ಸರ್ಕಾರದ ಅವಧಿಯ ಯೋಜನೆಗಳನ್ನು ಮಾತ್ರ ಇವರು ಪೂರ್ಣಗೊಳಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಬೆಂಗಳೂರು-ಮೈಸೂರು ಹೈ ವೇ ಕಾಮಗಾರಿಯ ಫಲಶೃತಿ ಸಿದ್ದರಾಮಯ್ಯ ಮತ್ತು ಆಸ್ಕರ್ ಫರ್ನಾಂಡೀಸ್ ಅವರಿಗೆ ಸಲ್ಲಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News