×
Ad

ಸರಕಾರ ಹಣ ಪಾವತಿ ಮಾಡದ ಆರೋಪ: ಔಷಧ ಸರಬರಾಜು ಸ್ಥಗಿತಗೊಳ್ಳುವ ಆತಂಕ

Update: 2022-01-31 23:34 IST
ಸಾಂದರ್ಭಿಕ ಚಿತ್ರ- PTI

ಬೆಂಗಳೂರು, ಜ.31: ರಾಜ್ಯ ಸರಕಾರವೂ ಔಷಧ ಸರಬರಾಜುದಾರರಿಗೆ ಸೂಕ್ತ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದ್ದು, ರಾಜ್ಯದೆಲ್ಲೆಡೆ ಔಷಧ ಸರಬರಾಜು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಕರ್ನಾಟಕ ರಾಜ್ಯ ವೈದಕೀಯ ಸರಬರಾಜು ನಿಗಮದಲ್ಲಿ (ಕೆಎಸ್‍ಎಂಎಸ್‍ಸಿಎಲ್) ಶೇ.100 ಔಷಧಗಳನ್ನು ಸರಬರಾಜು ಮಾಡಿದ್ದರೂ ಪೂರೈಕೆದಾರರಿಗೆ ಹಣ ಕೈಸೇರಿಲ್ಲ. ಗೋದಾಮಿನಿಂದ ಬಿಲ್‍ಗಳು ಕೇಂದ್ರ ಕಚೇರಿಗೆ ಬಂದಿಲ್ಲ ಎಂಬ ಕಾರಣವೊಡ್ಡಿ ಹಣ ಮಂಜೂರು ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸರಬರಾಜುದಾರರೊಬ್ಬರು, ಗೋದಾಮಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಿಂದ ಬಿಲ್‍ಗಳನ್ನು ಪಡೆದು ತಕ್ಷಣ ಹಣ ನೀಡಬೇಕೆಂಬ ನಿಯಮವಿದೆ. ಆದರೆ, ಕಮಿಷನ್ ಆಸೆಗಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಔಷಧ ಸರಬರಾಜು ಮಾಡಿರುವ ಪೂರೈಕೆದಾರರು ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅದು ಅಲ್ಲದೆ, ಕಳೆದ ನವೆಂಬರ್‍ನಲ್ಲಿ ಕೆಎಸ್‍ಎಂಎಸ್‍ಸಿಎಲ್‍ನಲ್ಲಿ ಇ ಪೇಮೆಂಟ್ ಮಾಡಲ್ ಜಾರಿಗೆ ಬಂದರೂ ಹಣ ಕೈಸೇರಿಲ್ಲ. ಶೇ.100 ಔಷಧ ಬಿಲ್‍ಗಳು ಬಂದರೆ ಮಾತ್ರ ಹಣ ಮಂಜೂರು ಮಾಡಲಾಗುವುದು ಎಂದು ಟೆಂಡರ್‍ನಲ್ಲಿ ಯಾವುದೇ ಷರತ್ತುಗಳು ನಮೂದಿಸಿಲ್ಲ.  ಪಾವತಿ ಅದಾಲತ್‍ನಲ್ಲಿಯೂ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.

ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ಔಷಧ ಬಿಲ್, ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್‍ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಔಷಧ ಹಣ ಬಿಡುಗಡೆ ಆಗುತ್ತಿದೆ. ಆದರೆ, ಕೆಎಸ್‍ಎಂಎಸ್‍ಸಿಎಲ್‍ನಲ್ಲಿ ಸರಿಯಾದ ಸಮಯಕ್ಕೆ ಬಾಕಿ ಬಿಲ್‍ಗಳಿಗೆ ಹಣ ಪಾವತಿಯಾಗುತ್ತಿಲ್ಲ ಎಂದು ಅವರು ಹೇಳಿದರು.

ಬಿಡ್ಡರ್ ಟೆಂಡರ್‍ನಲ್ಲಿ ಭಾಗವಹಿಸಿದಾಗ ಇಲಾಖೆ ಅರ್ನೆಸ್ಟ್ ಮನಿ ಡೆಪಾಸಿಟ್‍ನ್ನು ಸಂಗ್ರಹಿಸುತ್ತದೆ. ಟೆಂಡರ್‍ನಲ್ಲಿ ಎಲ್1ಗೆ ಆಯ್ಕೆಯಾದ ಬಿಡ್ಡರ್, ಭದ್ರತಾ ಠೇವಣಿಯನ್ನು ಇಲಾಖೆಗೆ ಸಲ್ಲಿಸಿದ ನಂತರ ಕೆಟಿಪಿಪಿ ಕಾಯ್ದೆ  ಪ್ರಕಾರ ಅವರಿಗೆ ಮರುಪಾವತಿಸಬೇಕು.  ರದ್ದಾದ ಮತ್ತು ಮತ್ತೆ ಟೆಂಡರ್ ನಡೆಸಿದ್ದ ಬಳಿಕವೂ ಬಿಡ್ಡರ್‍ಗೆ ಭದ್ರತಾ ಠೇವಣಿ ಮತ್ತು ಇಎಂಡಿ ಮರು ಪಾವತಿಸುತ್ತಿಲ್ಲ.  2005ರಿಂದ ಕೋಟ್ಯಂತರ ರೂಪಾಯಿ ಭದ್ರತಾ ಠೇವಣಿ ಮತ್ತು ಔಷಧ ಬಾಕಿ ಉಳಿದಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News