ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಚಿಕ್ಕಮಗಳೂರು ನಗರ ಬಂದ್
ಚಿಕ್ಕಮಗಳೂರು: ಗಣರಾಜಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಇರಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ತೆರವುಗೊಳಿಸಿದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ನಡೆಯನ್ನು ಖಂಡಿಸಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಕರೆದಿದ್ದ ಚಿಕ್ಕಮಗಳೂರು ನಗರ ಬಂದ್ ಭಾಗಶಃ ಯಶಸ್ವಿಯಾಗಿದೆ.
ಮಂಗಳವಾರ ಬೆಳಗ್ಗೆಯೆ ರಸ್ತೆಗಿಳಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ನಗರದ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಾರ್ಕೆಟ್ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಸ್ವಯಂ ಪ್ರೇರಿತವಾಗಿ ಕೆಲವರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೇ, ಕೆಲವು ಅಂಗಡಿ ಮಾಲಕರು ಸಂಘಟನೆಯ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಬಂದ್ ಮಾಡಿದರು.
ಪೆಟ್ರೋಲ್ ಬಂಕ್, ಮೆಡಿಕಲ್, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ಪ್ರವೃತ್ತವಾದರೂ ಜನರ ಸಂಖ್ಯೆ ವಿರಳವಾಗಿತ್ತು.
ಆಟೋ ಸಂಚಾರ ಎಂದಿಗಿಂತ ಕಡಿಮೆ ಇತ್ತು. ಕೆಎಸ್ಆರ್ ಟಿಸಿ ಬಸ್ ಸಂಚಾರವಿದ್ದರೂ ಪ್ರಯಾಣಿಕರು ಸಂಖ್ಯೆ ಕಡಿಮೆ ಇತ್ತು. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸಂಘಟನೆಗಳ ಕಾರ್ಯಕರ್ತರ ಮನವಿ ಮೇರೆಗೆ ಕೆಲವು ಶಾಲಾ ಕಾಲೇಜುಗಳು ಬಂದ್ ಮಾಡಲಾಗಿತ್ತು. ಕೆಲವು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಗ್ರಾಮೀಣ ಪ್ರದೇಶದಿಂದ ಕೆಲಸ ಕಾರ್ಯಗಳ ನಿಮ್ಮಿತ್ತ ಬಂದಿದ್ದವರು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಒಟ್ಟಾರೆ ವಿವಿಧ ಸಂಘಟನೆಗಳು ಕರೆದಿದ್ದ ಚಿಕ್ಕಮಗಳೂರು ನಗರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.