ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ವಜಾಗೊಳಿಸಿ: ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ಆಗ್ರಹ

Update: 2022-02-01 08:46 GMT

ಕುಶಾಲನಗರ: ಗಣರಾಜ್ಯೋತ್ಸವ ಸಂದರ್ಭ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋವನ್ನು ತೆಗೆಯುವಂತೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಹೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ಜಿಲ್ಲಾ ನ್ಯಾಯಾಧೀಶರು ಸಂವಿಧಾನ ಶಿಲ್ಪಿಗೆ ಅವಮಾನ ಎಸಗಿದ್ದಾರೆ. ಅವರನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಕುಶಾಲನಗರದ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕುಶಾಲನಗರದ ಐಬಿಯಿಂದ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಜಿಲ್ಲಾ ನ್ಯಾಯಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಚೇರಿಗೆ ಸಾಗಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಸ್.ಜೆ.ಸತೀಶ್, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮದಿಂದ ನಮ್ಮ ದೇಶಕ್ಕೆ ಸಂವಿಧಾನ ರಚನೆಯಾಗಿದೆ. ಆದರೆ ಗಣರಾಜ್ಯೋತ್ಸವ ಆಚರಣೆಯ ಸಂದರ್ಭ, ಸಂವಿಧಾನ ಶಿಲ್ಪಿಯ ಪೋಟೋವನ್ನೇ ತೆಗೆಯುವಂತೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಹೇಳಿದ್ದಾರೆ. ತಮ್ಮ ಹೇಳಿಕೆಯ ಮೂಲಕ ದೇಶದ್ರೋಹ ಎಸಗಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ಅವರು ಕರಿ ಕೋಟು ಧರಿಸುತ್ತಿದ್ದಾರೆ. ಅವರಿಗೆ ನ್ಯಾಯಾಧೀಶರಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಕೂಡಲೇ ಅವರನ್ನು ನ್ಯಾಯಾಧೀಶರ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಟ್ರಸ್ಟ್‌ನ ಕಾರ್ಯದರ್ಶಿ ಟಿ.ಆರ್.ಸತೀಶ್, ಪದಾಧಿಕಾರಿಗಳಾದ ಅಣ್ಣಯ್ಯ, ಲೋಕೇಶ್, ರಾಮ್ ಪ್ರಸಾದ್, ಮಂಜುನಾಥ್, ಮನು, ಶಿವು, ಕಲಾವಿದ ರಾಜು, ಎಸ್.ಜೆ.ರಾಜು, ರುದ್ರಾಂಬೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News