ಸರಕಾರಿ ಆಸ್ತಿ ಶ್ರೀಮಂತ ಸ್ನೇಹಿತರಿಗೆ ಮಾರಾಟ ಮಾಡಲು ಬಜೆಟ್: ಪ್ರಿಯಾಂಕ್ ಖರ್ಗೆ ಟೀಕೆ

Update: 2022-02-01 12:38 GMT

ಬೆಂಗಳೂರು, ಫೆ. 1: `ಕರ್ನಾಟಕದಿಂದ ಆಯ್ಕೆಯಾಗಿ, ರಾಜ್ಯಕ್ಕೆ 2022-23ನೆ ಸಾಲಿನ ಬಜೆಟ್‍ನಲ್ಲಿ ಯಾವುದೇ ಹೊಸ ಯೋಜನೆ/ವಿಶೇಷ ನೆರವು ಒದಗಿಸದೇ ನಿರ್ಮಲಾ ಸೀತಾರಾಮನ್ ವಂಚಿಸಿದ್ದಾರೆ. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯಗಳ ತಲೆ ಮೇಲೆ 1 ಲಕ್ಷ ಕೋಟಿ ರೂ.ಸಾಲ ಕಟ್ಟಿರುವುದೇ ಈ ಬಜೆಟ್‍ನ ಸಾಧನೆಯಾಗಿದೆ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ಏರ್ ಇಂಡಿಯಾ ಬಂಡವಾಳ ಹಿಂತೆಗೆತ, ಎಲ್‍ಐಸಿ ಮಾರಾಟ, ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ, ಇರೋದೆಲ್ಲವನ್ನೂ ಮಾರೋದೇನಾ ಬಿಜೆಪಿಯ ಆತ್ಮನಿರ್ಭರತೆ? ಸರಕಾರಿ ಆಸ್ತಿಗಳನ್ನ ಮಾರಾಟ ಮಾಡಿ ಹಣ ಮಾಡಿದರೂ ಜನರ ಮೇಲಿನ ಸಾಲವೂ ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ಈ ಹಣವೆಲ್ಲಾ ಸೇರುತ್ತಿರುವುದು ಯಾರ ಜೇಬಿಗೆ?' ಎಂದು ಪ್ರಶ್ನಿಸಿದ್ದಾರೆ.

`ಕೋವಿಡ್ ಲಾಕ್‍ಡೌನ್, ಹಣದುಬ್ಬರ, ಕೋವಿಡ್ ಇವೆಲ್ಲವುಗಳಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಆಗುವ ಆಶಾಭಾವನೆ ಇತ್ತು. ಆದರೆ ಪ್ರಧಾನಮಂತ್ರಿ ಮೋದಿ ಅವರಿಗೆ ಜನರ ಬವಣೆ ಕಣ್ಣಿಗೆ ಬೀಳಲೇ ಇಲ್ಲ. ಸರಕಾರಿ ಆಸ್ತಿಗಳನ್ನು ತಮ್ಮ ಶ್ರೀಮಂತ ಸ್ನೇಹಿತರಿಗೆ ಮಾರಾಟ ಮಾಡುವುದಕ್ಕಾಗಿಯೇ ಈ ಬಜೆಟ್ ಮಾಡಲಾಗಿದೆ ಅಷ್ಟೆ' ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಅದಾನಿ-ಅಂಬಾನಿಗಾಗಿ ಬಜೆಟ್

`ಕೇಂದ್ರ ಬಜೆಟ್ ಅದಾನಿ-ಅಂಬಾನಿಗೆ ಮಾತ್ರ ಮಾಡಿದ ಬಜೆಟ್ ಆಗಿದೆ. ಹಮ್ ದೋ ಹಮಾರೆ ದೋ ಎಂಬ ಬಜೆಟ್ ಆಗಿದೆ. ರಾಜ್ಯಕ್ಕೆ ಬಹಳಷ್ಟು ಹಣ ಹರಿದು ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ, ಇಂದು ಬಜೆಟ್‍ನಲ್ಲಿ ಏನೂ ಬಂದಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾದವರು. ಮೂರು ನಾಲ್ಕು ಬಜೆಟ್ ಆಗಿ ಹೋಗಿದೆ. ಆದರೆ, ರಾಜ್ಯದ ಆಸೆ, ಆಕಾಂಕ್ಷೆ ಏನು ಎನ್ನುವುದೇ ಅವರಿಗೆ ಗೊತ್ತಾಗಿಲ್ಲ. ಎಸ್ಸಿ-ಎಸ್ಟಿ ವರ್ಗಕ್ಕೆ ಏನೂ ಇಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದ ಅವರು ಈಗ ಅರವತ್ತು ಲಕ್ಷ ಉದ್ಯೋಗ ಸೃಷ್ಟಿ ಎಂದು ಒಪ್ಪಿದ್ದಾರೆ. ಅವೈಜ್ಞಾನಿಕ ಲಾಕ್‍ಡೌನ್‍ನಿಂದ 25 ಕೋಟಿ ಜನ ವಾಪಸ್ ಬಡತನ ರೇಖೆಗಿಂತ ಕೆಳಕ್ಕೆ ಹೋಗಿದ್ದಾರೆ. ಅದರ ಬಗ್ಗೆ ಏನೂ ಪ್ರಸ್ತಾಪ ಇಲ್ಲ'

-ಪ್ರಿಯಾಂಕ್ ಖರ್ಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News