ಹರಿಹರ: ಗಣರಾಜ್ಯೋತ್ಸವ ವೇಳೆ ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಅವಮಾನ; ಪಿಡಿಒ ವಿರುದ್ಧ ದೂರು

Update: 2022-02-01 12:51 GMT

ಹರಿಹರ: ತಾಲೂಕು ಗುತ್ತೂರಿನ ಗ್ರಾಪಂನಲ್ಲಿ ಜ.26ರಂದು ಆಚರಿಸಿದ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಭಾವಚಿತ್ರವನ್ನು ಇಡದೆ ಅಪಮಾನ ಮಾಡಿರುವ ಪಿಡಿಒ ವಿಜಯಲಕ್ಷ್ಮಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ತಾಲ್ಲೂಕು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಜಿಲ್ಲಾ ಅಧೀಕ್ಷಕರಿಗೆ ದೂರು ನೀಡಿದರು. 

ಗುತ್ತೂರು ಗ್ರಾಪಂನಲ್ಲಿ ಗಣರಾಜ್ಯೋತ್ಸವದಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ನೇತಾಜಿ ಸುಭಾಷ್ ಚಂದ್ರಭೋಸ್‍ರವರ ಭಾವಚಿತ್ರವನ್ನಿಡಲಾಗಿದೆ. ಆದರೆ, ಆ ದಿನದ ಮಹತ್ವಕ್ಕೆ ಕಾರಣಕರ್ತರಾದ ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರವನ್ನಿಟ್ಟಿಲ್ಲ. ಸರಕಾರವು ಗಣರಾಜ್ಯೋತ್ಸವದಂದು ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರವನ್ನಿಡಲು ಸ್ಪಷ್ಟವಾಗಿ ಸೂಚಿಸಿದೆ. ಆದರೂ ಕೂಡ ಉದ್ದೇಶಪೂರ್ವಕವಾಗಿ ಲೋಪವೆಸಗಲಾಗಿದೆ. ಇದು ಡಾ.ಬಿ.ಆರ್.ಅಂಬೇಡ್ಕರ್‍ರವರ ಬಗ್ಗೆ, ದಲಿತರ ಬಗ್ಗೆ ಸದರಿ ಪಿಡಿಒ ವಿಜಯಲಕ್ಷ್ಮಿಯವರು ಹೊಂದಿರುವ ದುರುದ್ದೇಶದ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು-2021ರ ನಿಯಮ-3 (1) ನ್ನು ಇವರು ಸ್ಪಷ್ಟವಾಗಿ ಉಲಂಘಿಸಿದ್ದಾರೆ. ಸದರಿ ತಪ್ಪಿತಸ್ಥ ಪಿಡಿಒ ವಿಜಯಲಕ್ಷ್ಮಿ ಇವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ನಿರ್ದೇಶನಾಲಯದ ಅಧಿಕಾರಿ ಟಿ.ಎಸ್.ನಾಯ್ಕ್ ದೂರನ್ನು ಸ್ವೀಕರಿಸಿದರು. ನಂತರ ಕಾರ್ಯಕರ್ತರ ನಿಯೋಗವು ಜಿಪಂ ಉಪ ಕಾರ್ಯದರ್ಶಿ ಆನಂದ್ ಇವರನ್ನು ಭೇಟಿ ಮಾಡಿ ಅವರಿಗೂ ದೂರು ಸಲ್ಲಿಸಿ, ಸದರಿ ಪಿಡಿಒ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಗ್ರಾಪಂ ಕಚೇರಿಗೆ ಬೀಗ ಹಾಕುವ ಹೋರಾಟ ಶೀಘ್ರವೇ ಹಮ್ಮಿಕೊಳ್ಳಲಾಗುವುದೆಂದರು.

ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ವಕೀಲರಾದ ಕೆ.ಇಬ್ರಾಹೀಂ ಖಲೀಲ್ ಉಲ್ಲಾ, ಗ್ರಾಪಂ ಸದಸ್ಯ ಎಚ್.ಎಂ.ಹನುಮಂತಪ್ಪ, ಮಂಜಪ್ಪ ಗುಳದಹಳ್ಳಿ, ಆಂಜಿನಪ್ಪ, ಗುಡದಪ್ಪ ಮಲ್ಲನಾಯಕನಹಳ್ಳಿ, ಪರಶುರಾಮ, ಪ್ರಭಾಕರ, ರವಿಶಂಕರ, ದುಗ್ಗೇಶ್ ದಾವಣಗೆರೆ, ಪ್ರದೀಪ್, ರವಿ, ಅಣ್ಣೇಶ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News