ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿರುವ ಕೇಂದ್ರ ಸರಕಾರದ ಬಜೆಟ್: ಕುರುಬೂರು ಶಾಂತಕುಮಾರ್

Update: 2022-02-01 13:16 GMT

ಬೆಂಗಳೂರು, ಫೆ.1: ರೈತರು ಒಂದು ವರ್ಷ ಹೋರಾಟ ಮಾಡಿ 700 ಜನ ಪ್ರಾಣಾರ್ಪಣೆ ಮಾಡಿದರೂ ಗಂಭೀರವಾಗಿ ಪರಿಗಣಿಸದೆ ಕೇಂದ್ರ ಸರಕಾರ ಈಗ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡದೆ, ಹಾಲಿ ಇರುವ ಎಂ.ಎಸ್.ಪಿ ಅನುದಾನವನ್ನು ಕಡಿಮೆ ಮಾಡಿ ಬೆಂಬಲ ಬೆಲೆ ಪದ್ಧತಿಯನ್ನು ರದ್ದು ಮಾಡಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಟ್ರ್ಯಾಕ್ಟರ್, ಪವರ್ ಟಿಲ್ಲರ್, ರಸಗೊಬ್ಬರ, ಕೀಟನಾಶಕ ಮೇಲಿನ ಜಿಎಸ್‍ಟಿ ತೆರಿಗೆ ರದ್ದುಪಡಿಸುವಂತೆ ಕೋರಲಾಗಿತ್ತು. ಆದರೆ, ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿರುವುದು ಶ್ರೀಮಂತರ ಮೇಲಿನ ಕಾಳಜಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಸ್ವಾಮಿನಾಥನ್ ವರದಿ ಜಾರಿ, 2022ಕ್ಕೆ ರೈತರ ಆದಾಯ ದ್ವಿಗುಣ ಎಂದು ಹೇಳಿ ರೈತರನ್ನು ಮೋಸಗೊಳಿಸಿ ಈಗ ಮತ್ತಷ್ಟು ಆಘಾತಗೊಳಿಸಿದೆ. ಬಜೆಟ್‍ನಲ್ಲಿ ಪ್ರಕಟಿಸಿರುವ ನದಿ ಜೋಡಣೆ, ಸಿರಿಧಾನ್ಯಗಳಿಗೆ ಒತ್ತು ನೀಡುವ ಯೋಜನೆ ದೀರ್ಘಾವದಿ ಕಾರ್ಯವಾಗಿದೆ. ಇದರಿಂದ ಕೊರೋನ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣಕ್ಕೆ ಯಾವುದೆ ಅನುಕೂಲವಿಲ್ಲ. ಇದು ನಿರಾಸೆಯ ಬಜೆಟ್ ಎಂದು ಕುರುಬೂರು ಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News