×
Ad

ದಲಿತಪರ ಕಾನೂನುಗಳನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ: ಶಾಸಕ ಎಂ.ಪಿ.ಕುಮಾರಸ್ವಾಮಿ

Update: 2022-02-01 18:56 IST

ಚಿಕ್ಕಮಗಳೂರು, ಫೆ.1: 'ದೇಶದಲ್ಲಿ ದಲಿತರು, ಶೋಷಿತರು, ಹಿಂದುಳಿದ ಸಮುದಾಯದವರು ಸೇರಿದಂತೆ ಬಡಜನತೆ ಸಂವಿಧಾನ ಹಾಗೂ ಕಾನೂನಿಗೆ ಅಪಾರ ಗೌರವ ನೀಡುತ್ತಿದ್ದಾರೆ. ಕಾನೂನಿನ ಭೀತಿಯಲ್ಲೇ ಈ ಜನ ಬದುಕುತ್ತಿದ್ದಾರೆ. ಆದರೆ ಮೇಲ್ವರ್ಗದವರು, ಶ್ರೀಮಂತ ಪ್ರಭಾವಿಗಳು, ಆಡಳಿತಶಾಹಿ ವ್ಯವಸ್ಥೆಯಲ್ಲಿರುವವರು ಕಾನೂನಿಗೆ ಬೆಲೆ ನೀಡುತ್ತಿಲ್ಲ, ಕಾನೂನಿಗೆ ಬಗ್ಗೆ ಭಯ ಇಲ್ಲದಂತೆ ಬದುಕುತ್ತಿದ್ದಾರೆ. ದಲಿತರ ಪರನಾಗಿದ್ದ ಕಾನೂನುಗಳನ್ನೂ ದುರ್ಬಲಗೊಳಿಸಲಾಗುತ್ತಿದೆ' ಎಂದು ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಮಗಳೂರು ನಗರ ಬಂದ್ ಹಿನ್ನೆಲೆಯಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಒಂದು ಧರ್ಮ, ಜಾತಿ, ವರ್ಗದವರಿಗಾಗಿ ಸಂವಿಧಾನ, ಕಾನೂನುಗಳನ್ನು ರಚನೆ ಮಾಡಿಲ್ಲ. ಇಡೀ ದೇಶದ ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳನ್ನು ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಇಂತಹ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಗಣರಾಜ್ಯೋತ್ಸವದ ದಿನದಂದೇ ಅವಮಾನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ರಾಯಚೂರು ಜಿಲ್ಲಾ ನ್ಯಾಯಾಧೀಶ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆರವು ಮಾಡಲು ಹೇಳುವ ಮೂಲಕ ಸಂವಿಧಾನ ಹಾಗೂ ದೇಶದ ಜನರನ್ನು ಅವಮಾನಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ತಾನು ರಾಜ್ಯಪಾಲರನ್ನು ಭೇಟಿಯಾಗಿ ಸೂಕ್ತ ಕಾನೂನು ಕ್ರಮ, ತನಿಖೆಗೆ ಮನವಿ ಮಾಡಿದ್ದೇನೆ. ಇಂತಹ ನ್ಯಾಯಾಧೀಶರಿಗೆ ಶಿಕ್ಷೆಯಾಗದಿದ್ದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಹೆಚ್ಚಿದೆ ಎಂದರು.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಲೋಪಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಾನೂನು ಇರುವುದು ಬಡವರಿಗೆ ಮಾತ್ರ ಎಂಬಂತಾಗಿದೆ. ಮೇಲ್ವರ್ಗದವರು, ಪ್ರಭಾವಿಗಳು, ಆಡಳಿತಶಾಹಿಗಳಿಗೆ ಕಾನೂನಿನ ಬಗ್ಗೆ ಭಯ ಇಲ್ಲದಂತಾಗಿದೆ. ದಲಿತರ ಜಮೀನುಗಳ ರಕ್ಷಣೆ, ಪರಭಾರೆ ಸಂಬಂಧ ಈ ಹಿಂದೆ ಇದ್ದ ಪಿಟಿಸಿಎಲ್ ಆಕ್ಟ್‍ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತಿದ್ದುಪಡಿ ತಂದಿದೆ. ದಲಿತರಿಗೆ ಸೇರಿದ ಜಮೀನುಗಳ ವ್ಯಾಜ್ಯಗಳಿಗೆ ಕಾಲಮಿತಿ ಹೇರಿಕೆ ಮಾಡಿದೆ. ಪರಿಣಾಮ ನಿರ್ದಿಷ್ಟ ಕಾಲಮಿತಿ ಮೀರಿದ ದಲಿತರ ಜಮೀನು ವಿವಾದಗಳಿಗೆ ನ್ಯಾಯಸಿಗದೇ ದಲಿತರ ಜಮೀನುಗಳು ಉಳ್ಳವರ ಪಾಲಾಗುವಂತಾಗಿದೆ ಎಂದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಇಂತಹ ಲೋಪಗಳಿಂದಾಗಿ ಜನರು ನ್ಯಾಯಾಂಗದ ಮೇಲಿಟ್ಟಿರುವ ಗೌರವಕ್ಕೆ ಚ್ಯುತಿ ಬರಲಿದೆ ಎಂದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಅಂಬೇಡ್ಕರ್ ಸಂವಿಧಾನ ಭಾರತ ದೇಶದ ಪ್ರತೀ ನಾಗರಿಕ, ಪ್ರತೀ ಜೀವಿಗೂ ರಕ್ಷಣೆ ನೀಡುತ್ತಿದೆ. ದೇಶದ ಆಡಳಿತ ವ್ಯವಸ್ಥೆಯೇ ಅಂಬೇಡ್ಕರ್ ಸಂವಿಧಾನದ ಮೇಲೆ ನಡೆಯುತ್ತಿದೆ. ಇಂತಹ ಸಂವಿಧಾನವನ್ನು ಜಾರಿ ಮಾಡುವವರು ಸರಿ ಇಲ್ಲದಿದ್ದರೇ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಪ್ರಯೋಜನ ಇರುವುದಿಲ್ಲ. ಪ್ರಸಕ್ತ ದೇಶದಲ್ಲಿ ಇಂತಹ ವ್ಯವಸ್ಥೆ ಇದ್ದು, ಸಂವಿಧಾನವೇ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲೇ ನ್ಯಾಯಾಧೀಶರೇ ಸಂವಿಧಾನಕ್ಕೆ ಅಗೌರವ ತೋರುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿದ್ದಾರೆ. ಈ ನ್ಯಾಯಾಧೀಶರ ವಿರುದ್ಧ ಇನ್ನೂ ಕಾನೂನು ಕ್ರಮಕೈಗೊಳ್ಳದಿರುವುದು ಸರಕಾರ, ನ್ಯಾಯ ವ್ಯವಸ್ಥೆಯ ಅಣಕವಾಗಿದೆ ಎಂದ ಅವರು, ವಿಕೃತ ಮನಸ್ಸಿನ ನ್ಯಾಯಾಧೀಶರಿಂದ ನೊಂದವರಿಗೆ ನ್ಯಾಯಸಿಗಲು ಸಾಧ್ಯವಿಲ್ಲ. ಸಂವಿಧಾನ ಆಶಯವೂ ಈಡೇರಲ್ಲ. ಇಂತಹ ನ್ಯಾಯಾಧೀಶರ ವಿರುದ್ಧ ಸುಪ್ರೀಂಕೋರ್ಟ್, ಹೈಕೋರ್ಟ್ ಕ್ರಮವಹಿಸಬೇಕು, ಸೇವೆಯಿಂದ ವಜಾ ಮಾಡಬೇಕೆಂದು. ಸಂವಿಧಾನದ ಮೀಸಲಾತಿಯಡಿ ಶಾಸಕರು, ಸಂಸದರಾದವರು ಈ ಬಗ್ಗೆ ಸರಕಾರವನ್ನು ಪ್ರಶ್ನಿಸಬೇಕು. ಕ್ರಮಕೈಗೊಳ್ಳದಿದ್ದಲ್ಲಿ ರಾಜೀನಾಮೆ ಎಸೆದು ಬರಬೇಕು ಎಂದು ಆಗ್ರಹಿಸಿದರು.

ಮಾನವ ಹಕ್ಕು ಸಂರಕ್ಷಣಾ ವೇದಿಕೆ ಮುಖಂಡ ಹೊನ್ನೇಶ್ ಮಾತನಾಡಿ, ಮನುಷ್ಯರನ್ನು ಅಸ್ಪøಶ್ಯರೆಂದು ಜಾತಿ ವ್ಯವಸ್ಥೆ ಮೂಲಕ ಬದುಕುವ ಹಕ್ಕು, ಸ್ವಾತಂತ್ರ್ಯ, ಸಮಾನತೆಯನ್ನು ಕಿತ್ತುಕೊಂಡ ಮನುವಾದಿಗಳ ಕಾನೂನು ಕಿತ್ತೊಗೆದು ದೇಶದ ಎಲ್ಲ ಸಮುದಾಯ, ಪ್ರತೀ ನಾಗರಿಕನಿಗೂ ಸಮಾನ ನಾಗರಿಕ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ, ಗೌರವವನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಜಾರಿ ಮಾಡಿದ್ದಾರೆ. ಇಂತಹ ಸಂವಿಧಾನ ಶಿಲ್ಪಿಗೆ ಆಗುವ ಅವಮಾನವನ್ನು ಸಹಿಸುವುದಿಲ್ಲ. ರಾಯಚೂರು ಘಟನೆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಕೂಡಲೇ ಬಂಧಿಸಬೇಕು. ಸೇವೆಯಿಂದ ವಜಾ ಮಾಡಬೇಕು. ತಪ್ಪಿದಲ್ಲಿ ಹೋರಾಟ ಇನ್ನೂ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ದಲಿತ ಸಂಘಟನೆಗಳ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಅನಂತ್ ಸೇರಿದಂತೆ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ನ್ಯಾಯಾಧೀಶರ ಬಂಧನ ಮತ್ತು ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೂದುವಳ್ಳಿ ಮಂಜುನಾಥ್, ಅಂಗಡಿಚಂದ್ರು, ಗಿರೀಶ್, ಲೋಕೇಶ್, ಕೃಷ್ಣಮೂರ್ತಿ, ಜಂಶೀದ್‍ಖಾನ್, ಗೌಸ್‍ಮೊಹಿದ್ದೀನ್, ಬಿಜೆಪಿ ಮುಖಂಡ ಹಂಪ್ಪಯ್ಯ, ವೆಂಕಟೇಶ್, ಜೆಡಿಎಸ್ ಪಕ್ಷದ ಚಂದ್ರಪ್ಪ, ಗಿರೀಶ್, ಮಂಜಪ್ಪ, ಕಾಂಗ್ರೆಸ್ ಪಕ್ಷದ ವಿನಯ್‍ರಾಜ್, ಹಿರೇಮಗಳೂರು ರಾಮಚಂದ್ರ, ಮಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಸ್‍ಡಿಪಿಐ ಪಕ್ಷ, ಪಿಎಫ್‍ಐ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಮುಂಖಡರು ಭಾಗವಹಿಸಿದ್ದರು. ಬಹಿರಂಗಸಭೆ ಬಳಿಕ ಮುಖಂಡರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಸುಪ್ರೀಂಕೋರ್ಟ್, ಹೈಕೋರ್ಟ್ ಮುಖ್ಯಸ್ಥರಿಗೆ ಈ ಸಂಬಂಧದ ಮನವಿ ಪತ್ರ ಸಲ್ಲಿಸಿದರು.

ನ್ಯಾಯಾಂಗ ವ್ಯವಸ್ಥೆ ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ನ್ಯಾಯಾಧೀಶರು ಸಂವಿಧಾನಕ್ಕೆ ಬದ್ಧರಾಗಿ, ಸಂವಿಧಾನದ ಆಶಯಗಳ ಈಡೇರಿಕೆ ಮಾಡುತ್ತೇವೆಂದೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇಂತಹ ನ್ಯಾಯಾಧೀಶರು ರಾಷ್ಟ್ರೀಯ ಹಬ್ಬದ ದಿನದಂದು ರಾಷ್ಟ್ರೀಯ ನಾಯಕ ಡಾ.ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡದಿದ್ದಲ್ಲಿ ಧ್ವಜಾರೋಹಣ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಭಾವಚಿತ್ರ ತೆರವು ಮಾಡಿರುವ ಘಟನೆ ದೇಶದ್ರೋಹದ ಕೃತ್ಯವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಕೂಡಲೇ ಬಂಧಿಸಿ, ಸೇವೆಯಿಂದ ವಜಾ ಮಾಡುವುದಲ್ಲದೇ ಗಡಿಪಾರು ಮಾಡಬೇಕು.

- ಆರ್.ಅನಿಲ್‍ಕುಮಾರ್, ವಕೀಲ, ಕಾರ್ಯಕ್ರಮ ಸಂಘಟಕ
 



ಮುಸ್ಲಿಮರ ಒಂದು ಕೈಯಲ್ಲಿ ಕುರಾನ್ ಇದ್ದರೇ, ಮತ್ತೊಂದು ಕೈಯಲ್ಲಿ ಅಂಬೇಡ್ಕರ್ ಸಂವಿಧಾನವಿದೆ. ಕುರಾನ್ ಹಾಗೂ ಸಂವಿಧಾನ ಮುಸ್ಲಿಮರ ಪಾಲಿಗೆ ಪವಿತ್ರ ಗ್ರಂಥಗಳೇ ಆಗಿವೆ. ಕುರಾನ್‍ಗೆ ಆಗುವ ಅವಮಾನವನ್ನು ಮುಸ್ಲಿಮರು ಹೇಗೆ ಸಹಿಸುವುದಿಲ್ಲವೋ ಹಾಗೆಯೇ ಸಂವಿಧಾನ ಹಾಗೂ ಅಂಬೇಡ್ಕರ್ ಆಗುವ ಅವಮಾನವನ್ನು ನಾವು ಸಹಿಸುದಿಲ್ಲ. ಇಂತಹ ಅವಮಾನಗಳನ್ನು ಎದುರಿಸಲು ಜೀವ ನೀಡಲೂ ಮುಸ್ಲಿಮರು ಸಿದ್ಧರಿದ್ದೇವೆ.

- ಹಜರತ್ ಅಲಿ ಮೌಲಾನ, ಮುಸ್ಲಿಂ ಧರ್ಮಗುರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News