'ಅಶಿಸ್ತಿನ ನಡವಳಿಕೆ' ಕಾರಣ ಕೇಳಿ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್
ಬೆಂಗಳೂರು, ಫೆ. 1: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕುರಿತು ಖಾಸಗಿಯಾಗಿ ಆಡಿದ್ದರೆನ್ನಲ್ಲಾದ ಮಾತುಗಳಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಪಿ.ಎಂ.ಅಶೋಕ್ ಪಟ್ಟಣ್ ಅವರಿಗೆ ಕಾರಣ ಕೇಳಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಡಾ.ಕೆ.ರಹ್ಮಾನ್ ಖಾನ್ ಅವರು ಮಂಗಳವಾರ ನೋಟಿಸ್ ಜಾರಿ ಮಾಡಿದ್ದಾರೆ.
`ಪಕ್ಷದ ನಾಯಕರೂ, ಅನುಭವಿ ಶಾಸಕರೂ ಆಗಿ, ತಿಳಿದಿರುವವರೂ ಆದ ತಾವು ಖಾಸಗಿಯಾಗಿ ಮಾತನಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಘನತೆ-ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿ ಉಂಟಾಗುವAತಹ ವಿಚಾರಗಳನ್ನು ಮಾತನಾಡಿರುವುದು ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿದೆ' ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
`ತಾವುಗಳು ಈ ಸಂದರ್ಭದಲ್ಲಿ ಮಾತನಾಡಿಕೊಂಡಿರುವ ವಿಚಾರಗಳು ಆಧಾರ ರಹಿತವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ. ತಮ್ಮ ಈ ವರ್ತನೆಯಿಂದ ಪಕ್ಷದ ಘನತೆ-ಗೌರವಗಳಿಗೆ ಕುಂದಾಟಾಗಿರುವುದು ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಈ ಮೇಲಿನ ನಡವಳಿಕೆಯ ಬಗ್ಗೆ ಏಳು ದಿನಗಳ ಒಳಗಾಗಿ ಸಮಜಾಯಿಷಿಯನ್ನು ನೀಡಬೇಕು' ಎಂದು ರೆಹ್ಮಾನ್ ಖಾನ್, ಪಟ್ಟಣ್‌ರಿಗೆ ನೀಡಿರುವ ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ.