ಹೊಸದುರ್ಗ ಪುರಸಭೆ ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ
ಹೊಸದುರ್ಗ, ಫೆ.1: ಪಟ್ಟಣದ ಪುರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಮಂಜುನಾಥ(30) ಪುರಸಭೆ ಆವರಣದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಏಕಾಏಕಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಿದಂತೆ ಕಚೇರಿಯಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ, ಪಕ್ಕದ ಕೊಠಡಿಯಲ್ಲಿದ್ದ ಪುರಸಭೆ ಅಧ್ಯಕ್ಷ , ಸದಸ್ಯರು ಹಾಗೂ ಸಾರ್ವಜನಿಕರು ಮಂಜುನಾಥನ ಮೈಮೇಲೆ ಹತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ.
ಅಷ್ಟರಲ್ಲಿಯೇ ಮೈಮೇಲೆ ಸುಟ್ಟಗಾಯಗಳು ಹೆಚ್ಚಾಗಿದ್ದವು. ಗಾಯಾಳುವನ್ನು ದಿಢೀರನೆ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
5 ವರ್ಷಗಳ ಹಿಂದೆ ಮಂಜುನಾಥ ಅವರನ್ನು ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿದ್ದರು. ಕಳೆದ ವರ್ಷ 2021ರಲ್ಲಿ 199 ದಿನ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಯಿತು. ಕಳೆದ ಜೂನ್‍ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥರನ್ನು ಕಚೇರಿಗೆ ಕರೆಯಿಸಿ ಈ ರೀತಿ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು
ಇದೀಗ ಮಂಗಳವಾರ ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಂಜುನಾಥನ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಪರಿಸರ ಅಭಿಯಂತರ ಜಿ.ವಿ.ತಿಮ್ಮರಾಜು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.