ವಿಡಿಯೋ ನೋಡಿ...: ಕುಮಾರಸ್ವಾಮಿ ಎದುರೇ ಶಾಸಕ ಸುರೇಶ್‍ಗೌಡಗೆ ಗ್ರಾಮಸ್ಥರ ತರಾಟೆ
ಮಂಡ್ಯ, ಫೆ.1: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದುರೇ ನಾಗಮಂಗಲ ಶಾಸಕ ಕೆ.ಸುರೇಶ್‍ಗೌಡ ಅವರನ್ನು ಸಾರ್ವಜನಿಕರು ಮತ್ತು ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.
ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡರ ಮಾವ ಅವರ ಅಂತ್ಯಸಂಸ್ಕಾರಕ್ಕೆ ನಾಗಮಂಗಲ ತಾಲೂಕಿನ ದೊಡ್ಡಉಪ್ಪಳ ಗ್ರಾಮಕ್ಕೆ ಶಾಸಕ ಸುರೇಶ್‍ಗೌಡರ ಜತೆ ಕುಮಾರಸ್ವಾಮಿ ಅವರು ತೆರಳುತ್ತಿದ್ದಾಗ ಕೌಡ್ಲೆ ಸಮೀಪದ ಕೆ.ಮಲ್ಲಿಗೆರೆ ಬಳಿ ಈ ಪ್ರಸಂಗ ನಡೆದಿದ್ದು, ಸುರೇಶ್‍ಗೌಡ, ಕುಮಾರಸ್ವಾಮಿ ಮುಜುಗರಕ್ಕೊಳಗಾದರು.
ಮಾರ್ಗಮಧ್ಯೆ ಕುಮಾರಸ್ವಾಮಿ ಅವರಿಗೆ ಸ್ವಾಗತಕೋರಲು ಆಗಮಿಸಿದ್ದ ಸುತ್ತಮುತ್ತಲ ಗ್ರಾಮಸ್ಥರು, ಸುರೇಶ್‍ಗೌಡ ಅವರು ಶಾಸಕರಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕುಮಾರಸ್ವಾಮಿ ಬಳಿ ದೂರಿದರು.
ಏನೂ ಕೆಲಸ ಮಾಡಿಲ್ಲವೆ ಎಂದು ಕುಮಾರಸ್ವಾಮಿ ಕೇಳಿದಾಗ, ತೀಷ್ಣವಾಗಿ ಪ್ರತಿಕ್ರಿಯಿಸಿದ ಮಲ್ಲಿಗೆರೆ ಗ್ರಾಮದ ಯುವಕನೊಬ್ಬ ಏನೂ ಕೆಲಸ ಮಾಡಿಲ್ಲ. ಈ ಹಿಂದೆ ಶಾಸಕರಾಗಿದ್ದ ಚಲುವರಾಯಸ್ವಾಮಿ ಅವರೂ ಮಾಡಿಲ್ಲ. ಕೆಲಸ ಮಾಡುವಂತೆ ಸೂಚಿಸಿ ಎಂದು ದೂರಿದರು. 9ನೇ ನಾಲೆ ಕಾಮಗಾರಿ ಕೆಲಸವನ್ನು ಮಾಡಿಲ್ಲವೆಂದೂ ಮತ್ತೊಬ್ಬ ರೈತ ಆರೋಪಿಸಿದರು.