×
Ad

ವಿದೇಶಕ್ಕೆ ತೆರಳಲು ಅನುಮತಿ ಕೋರಿ ಶ್ರೀಕೃಷ್ಣ ಸಹೋದರ ಅರ್ಜಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2022-02-01 21:11 IST

ಬೆಂಗಳೂರು, ಫೆ.1: ಬಿಟ್ ಕಾಯಿನ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಯಾನೆ ಶ್ರೀಕೃಷ್ಣ ಸಹೋದರ ಸುದರ್ಶನ್ ರಮೇಶ್ ಅವರು ನೆದರ್‌ಲ್ಯಾಂಡ್‌ಗೆ ಪ್ರವಾಸ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ನೆದರ್‌ಲ್ಯಾಂಡ್‌ನಲ್ಲಿ ಎಂಜಿನಿಯರ್ ಆಗಿರುವ ಸುದರ್ಶನ್ ರಮೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಟ, ಪ್ರತಿವಾದಿಗಳಾದ ಕೇಂದ್ರ ಸರಕಾರ, ಜಾರಿ ನಿರ್ದೇಶನಾಲಯ ಹಾಗೂ ಬ್ಯುರೊ ಆಫ್ ಇಮಿಗ್ರೇಷನ್‌ಗೆ ನೋಟಿಸ್ ಜಾರಿ ಮಾಡಿದೆ.

ಬಿಟ್ ಕಾಯಿನ್ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಶ್ರೀಕಿ ವಿರುದ್ಧ ಬಿಟ್ ಕಾಯಿನ್ ಹಗರಣದ ಆರೋಪ ಕೇಳಿ ಬಂದಾಗ ನಾನು ಭಾರತದಲ್ಲೇ ಇರಲಿಲ್ಲ ಎಂದು ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದೇನೆ. ಪ್ರಸ್ತುತ ನಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಕಲ್ಪಿಸುವ, ಅದಕ್ಕಾಗಿ ಹಣಕಾಸು ಹೊಂದಿಸುವ ಅವಶ್ಯಕತೆಯಿದೆ. ನನ್ನ ಕುಟುಂಬಕ್ಕೆ ನಾನೇ ಜೀವನಾಧಾರವಾಗಿದ್ದೇನೆ ಎಂದು ಸುದರ್ಶನ್ ರಮೇಶ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ, ಉದ್ಯೋಗಕ್ಕಾಗಿ ನೆದರ್‌ಲ್ಯಾಂಡ್‌ಗೆ ಹೋಗಲು ಜ.13ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳಲು ಮುಂದಾದಾಗ, ಇಮಿಗ್ರೇಷನ್ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ನಮ್ಮ ಪಾಸ್‌ಪೋರ್ಟ್ ನಿರ್ಬಂಧಿಸಿದ್ದಾರೆ. ವಿದೇಶ ಪ್ರವಾಸ ನಿರ್ಬಂಧಿಸಿರುವ ಬಗ್ಗೆ ಮುಂಚಿತವಾಗಿ ನನಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ, ವಿದೇಶ ಪ್ರವಾಸಕ್ಕೆ ಅಡ್ಡಿಯಾಗಿರುವ ಜಾರಿ ನಿರ್ದೇಶನಾಲಯದ ಆದೇಶ ರದ್ದುಪಡಿಸಬೇಕು. ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ವಿಧಿಸಿರುವ ನಿರ್ಬಂಧ ತೆರವು ಮಾಡುವಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಸುದರ್ಶನ್ ರಮೇಶ್ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News