×
Ad

ಮಡಿಕೇರಿ: ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ದರೋಡೆ; ದೂರು ದಾಖಲು

Update: 2022-02-01 21:19 IST
ಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರು 

ಮಡಿಕೇರಿ ಫೆ.1 : ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ನಡೆದಿದೆ.

ಸೋಮವಾರ ಮಧ್ಯ ರಾತ್ರಿ ವಾಂಜಂಡ ಜಾನಕಿ (78) ಹಾಗೂ ಅವರ ತಂಗಿ ಅಮ್ಮಕ್ಕಿ (68) ವಾಸವಿದ್ದ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ನಾಲ್ವರು ಚೋರರು 2.5 ಲಕ್ಷ ನಗದು ಹಾಗೂ ಸುಮಾರು 83 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರು ಮಹಿಳೆಯರನ್ನು ಕೋಣೆಯೊಂದರಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚಾಕುವಿನಿಂದ ಹತ್ಯೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭ ಅಂಗಲಾಚಿದ ಮಹಿಳೆಯರು ನಮ್ಮನ್ನು ಏನೂ ಮಾಡಬೇಡಿ, ಹಣ, ಒಡವೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಇದರಿಂದ ಸುಮ್ಮನಾದ ದುಷ್ಕರ್ಮಿಗಳು ಹಣ ಮತ್ತು ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ವಾಸವಿರುವ ಸಹೋದರ ನಿವೃತ್ತ ನ್ಯಾಯಾಧೀಶ ವಾಂಜಂಡ ಬೋಪಯ್ಯ ಅವರಿಗೆ ಮಹಿಳೆಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದ ಮಹಿಳೆಯರನ್ನು ನಾಫೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ನಂತರ ಮನೆಯ ಸುತ್ತ ಮಹಜರು ನಡೆಸಿದಾಗ  ಮದ್ಯದ ಪಾರ್ಟಿ ಮಾಡಿರುವುದು ಕಂಡು ಬಂದಿದೆ. ಈ ಘಟನೆಯಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ.

ಡಿ ವೈ ಎಸ್ಪಿ ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆಯ ಪಿಎಸ್‍ಐ ವೆಂಕಟೇಶ್, ನಾಪೋಕ್ಲು ಠಾಣೆಯ ಪ್ರಬಾರ ಠಾಣಾಧಿಕಾರಿ ಕುಶಾಲಪ್ಪ, ಸಿಬ್ಬಂದಿಗಳಾದ ರವಿಕುಮಾರ್, ಪಂಚಲಿಂಗಪ್ಪ, ನವೀನ್, ಸಾಜನ್ ಮಹಿಳಾ ಸಿಬ್ಬಂದಿ ರೇಷ್ಮಾ, ಚಾಲಕ ಷರೀಫ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News